ಅಧಿವೇಶನದಲ್ಲಿ ಶಿಕ್ಷಕರ ಸಮಸ್ಯೆ ಚರ್ಚೆ: ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ ಭರವಸೆ

Conversation program Mandya
Published on

ಮಂಡ್ಯ: ಕೆಲವೇ ದಿನದಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭವಾಗಲಿದೆ. ಶಿಕ್ಷಕರು, ಉಪನ್ಯಾಸಕರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ ಭರವಸೆ ನೀಡಿದರು.

ನಗರದ ಜಿಲ್ಲಾ ಉಪನ್ಯಾಸಕರ ಸಂಘದ ಕಚೇರಿ ಆವರಣದಲ್ಲಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ಬೋಧಕೇತರರ ವರ್ಗದವರು ಆಯೋಜಿಸಿದ್ದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದಕ್ಷಿಣ ಶಿಕ್ಷಕರ ಕ್ಷೇತ್ರ ವಾಪ್ತಿಯಲ್ಲಿ 29 ತಾಲೂಕಿನ ಅತಿಥಿ ಉಪನ್ಯಾಸಕರು, ಉಪನ್ಯಾಸಕರು ಮತ್ತು ಕಾಲೇಜು ಸಮಸ್ಯೆಗಳು ಗಮನಕ್ಕೆ ಬಂದಿವೆ ಎಂದರು.

ಎಲ್ಲ ಸಮಸ್ಯೆಗಳನ್ನು ಪರಿಹಾರ ಮಾಡಲು ನನ್ನೊಬ್ಬನಿಂದ ಸಾಧ್ಯವಿಲ್ಲ. ಹಂತ ಹಂತವಾಗಿ ಸರ್ಕಾರದ ಮಟ್ಟ, ಸ್ಥಳೀಯ ಶಾಸಕರು, ಸಚಿವರು, ಎಂಪಿಗಳೊಅದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಮುಂದಾಗೋಣ. ದಕ್ಷಿಣ ಶಿಕ್ಷಕರ ಕ್ಷೇತ್ರ ವಾಪ್ತಿಗೆ 2 ಕೋಟಿ ರೂ ಅನುದಾನ ಬರುತ್ತದೆ. ಇದನ್ನು ಸಮನಾಗಿ 29 ತಾಲೂಕಿಗೂ ಹಂಚಿಕೆ ಮಾಡಬೇಕಿದೆ. ನನಗೆ ಬರುವ ವೇತನವನ್ನೂ ಶಿಕ್ಷಕರ ಕ್ಷೇತ್ರಕ್ಕೆ ವಿನಿಯೋಗಿಸುತ್ತಿದ್ದೇನೆ. ಪ್ರತಿ ತಾಲೂಕಿನ ಕೆಡಿಪಿ ಸಭೆ ಭಾಗವಹಿಸಿ ಒಂದಷ್ಟು ಸಮಸ್ಯೆಗಳಿಗೆ ಪರಿಹಾರ ಮಾಡುವ ಕೆಲಸ ಮಾಡುತ್ತಿದ್ದೇನೆ ಎಂದರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಬಳಿ ಉಪನ್ಯಾಸಕರ ನಿಯೋಗ ತೆರಳಿ, ಅವರ ಗಮನ ಸೆಳೆದು ಕೇಂದ್ರ ಸರ್ಕಾರದ ಅನುದಾನಗಳನ್ನು ಬಳಸಿಕೊಳ್ಳಲು ಮನವಿ ಸಲ್ಲಿಸೋಣ. ಸ್ಥಳೀಯ ಸಂಘ ಸಂಸ್ಥೆ, ದಾನಿ, ಉದ್ಯಮಿಗಳ ಸಹಕಾರ, ಆರ್ಥಿಕ ನೆರವು ಪಡೆದು ಸಣ್ಣ ಪುಟ್ಟದಾಗಿರುವ ಕಾಲೇಜು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕಿದೆ ಎಂದರು.

ಸಂಘದ ಜಿಲ್ಲಾಧ್ಯಕ್ಷ ಚನ್ನಕೃಷ್ಣ, ಪ್ರಾಂಶುಪಾಲರಾದ ಶಿವಲಿಂಗೇಗೌಡ, ಹನುಮಂತಯ್ಯ, ನೌಕರರ ಸಂಘದ ನಿರ್ದೇಶಕ ನಾಗೇಶ್, ಮಂಗಲ ಶಿವಣ್ಣ, ಡಾ.ಮನುಕುಮಾರ್, ತಮ್ಮೇಗೌಡ ಇತರರಿದ್ದರು.

ಇದೇ ವೇಳೆ ಎಂಎಲ್‌ಸಿ ಕೆ.ವಿವೇಕಾನಂದ ಮತ್ತು ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಎ.ಎಚ್.ನಿಂಗೇಗೌಡ ಅವರನ್ನು ಅಭಿನಂದಿಸಲಾಯಿತು. ಅಂತೆಯೇ ಶಿಥಿಲಗೊಂಡಿರುವ ಕಾಲೇಜು, ಕಾಂಪೌಂಡ್ ನಿರ್ಮಾಣ ಮತ್ತು ಬೋಧಕ ವರ್ಗದ ಸಮಸ್ಯೆ ಬಗ್ಗೆ ಚರ್ಚೆ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net