

ಮಂಡ್ಯ: ಇಂದಿನ ದಿನದಲ್ಲಿ ಸಮಾಜದಲ್ಲಿ ಹಲವು ಜನರು ಅಭಿವೃದ್ಧಿಯಿಂದ ದೂರ ಉಳಿದಿದ್ದಾರೆ. ಅಂತಹವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಮೂಲಕ ಸಮಾಜದ ಸುಧಾರಣೆ ಮಾಡುವ ಕೆಲಸ ಆಗಬೇಕು ಎಂದು ಅಜೀಂ ಪ್ರೇಮ್ ಜೀ ಫೌಂಡೇಷನ್‌ನ ವಲಯ ಸಂಯೋಜಕಿ ಜಿ.ಟಿ.ಪದ್ಮಾ ಅಭಿಪ್ರಾಯಪಟ್ಟರು.
ನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶ, ಅಜೀಂ ಪ್ರೇಮ್ ಜಿ ಫೌಂಡೇಷನ್ ಸಹಯೋಗದಲ್ಲಿ ಆಯೋಜಿಸಿದ್ದ ಮಹಿಳಾ ಸಬಲೀಕರಣ ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನ್ಯಾಯ, ಸಮಾನತೆ, ಸದೃಢ ಸಮಾಜ ಕಟ್ಟುವ ಉದ್ದೇಶದಿಂದ ಫೌಂಡೇಷನ್ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆ ಭಾರತ ಸಂವಿಧಾನದ ಆಶಯ ಮೌಲ್ಯಗಳ ನೆಲೆಗಟ್ಟಿನಲ್ಲಿ ತನ್ನ ಮಾನವೀಯ ಸೇವೆ ಮಾಡುತ್ತಿದೆ. ಇದು ಇಡೀ ದೇಶಾದ್ಯಂತ ಅರಿವು, ಜಾಗೃತಿ ಸಂವೇದನಾಶೀಲತೆ, ಮೌಲ್ಯಗಳ ಜೀವನ ಕುರಿತಾದ ಸಮಾಜಮುಖಿ ಸೇವೆಯನ್ನು ಕಾರ್ಯರೂಪಕ್ಕೆ ತರುವ ಮೂಲಕ ಸುಸ್ಥಿರ ಪ್ರಗತಿಯ ಕನಸನ್ನು ಕಾಣುತ್ತಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಗುರುರಾಜ ಪ್ರಭು ಮಾತನಾಡಿ, ಹೊಸ ಯುಗದಲ್ಲಿ ನೂತನ ಸವಾಲಿಗೆ ಮಹಿಳೆಯರು ಹೇಗೆ ಸ್ಪಂದಿಸಬೇಕೆಂಬುದನ್ನು ತಿಳಿದುಕೊಂಡು ಪ್ರಗತಿಯತ್ತ ತಮ್ಮನ್ನು ತೊಡಗಿಸಿಕೊಳ್ಳಬೇಕು. ಪ್ರಜಾಪ್ರಭುತ್ವ ಬಂದು 70 ವರ್ಷ ಕಳೆದಿದೆ. ಅಲ್ಲಿಂದ ಇಲ್ಲಿವರೆಗೂ ಮಹಿಳೆಯರ ಮೇಲಿನ ಶೋಷಣೆ, ಅಸಮಾನತೆ, ಸಮಾಜದಲ್ಲಿ ಭಾಗವಹಿಸುವ ಅವಕಾಶದಿಂದ ವಂಚಿತರಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರು ಪಾಲ್ಗೊಳ್ಳುವಿಕೆ ಆಶಾದಾಯಕವಾಗಿದೆ. ಆದರೆ ಸಂಪೂರ್ಣವಾಗಿಲ್ಲ ಎಂದು ಹೇಳಿದರು.
ಹಿಂದಿನ ಕಾಲಘಟ್ಟದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಪ್ರಮಾಣ ತುಂಬಾ ಕಡಿಮೆ. ಜತೆಗೆ ಅಸಮಾನತೆ ಎಂಬುದು ಪರಂಪರಗತವಾಗಿ ನಡೆದು ಬಂದ ಪ್ರಕ್ರಿಯೆ ಆಗಿತ್ತು. ಇಂದು ಮೇಲ್ನೋಟಕ್ಕೆ ಪುರುಷರು ಮತ್ತು ಮಹಿಳೆಯರು ಸಮಾನವಾಗಿದ್ದಾರೆ ಎಂದು ಕಂಡುಬಂದರೂ ಇನ್ನೂ ಸಹ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಅಸಮಾನತೆಯನ್ನು ಮಹಿಳೆ ಎದುರಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಶಿವಶಂಕರ್, ವೈಶಾಲಿ, ಪೂಜಾ, ಸಹ ಪ್ರಾಧ್ಯಾಪಕ ದಾನೇಗೌಡ, ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿಗಳಾದ ಡಾ.ಎಚ್.ಎಸ್.ಶಿವರಾಜು, ಮಾದೇಗೌಡ, ಎಂ.ಬಿ.ಪುಷ್ಪಲತಾ ಇತರರಿದ್ದರು. ಇದೇ ಸಂದರ್ಭದಲ್ಲಿ ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದ 60ಕ್ಕೂ ಹೆಚ್ಚು ಭಿತ್ತಿಚಿತ್ರಗಳನ್ನ ಪ್ರದರ್ಶನ ಮಾಡಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಯಿತು.