ಪಾರದರ್ಶಕ ಆಡಳಿತಕ್ಕೆ ಕಾಯ್ದೆ ಸಹಕಾರಿ: ರಾಜ್ಯ ಮಾಹಿತಿ ಆಯೋಗದ ಆಯುಕ್ತ ಡಾ.ಹರೀಶ್‌ಕುಮಾರ್ ಹೇಳಿಕೆ

Conversation on Right to Information Act Mandya
Published on

ಮಂಡ್ಯ: ಪಾರದರ್ಶಕ ಆಡಳಿತ ಅಳವಡಿಸಿಕೊಳ್ಳಲು ಮಾಹಿತಿ ಹಕ್ಕು ಕಾಯ್ದೆ ಸಹಕಾರಿ ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಡಾ.ಹರೀಶ್‌ಕುಮಾರ್ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಅಧಿಕಾರಿಗಳ ಮಾಹಿತಿ ಹಕ್ಕು ಕಾಯ್ದೆಯ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಸಲ್ಲಿಸಬಹುದು. ಸಾರ್ವಜನಿಕ ಮಾಹಿತಿ ಅಧಿಕಾರಿ ಮೊದಲು ಅರ್ಜಿ ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು ಎಂದರು.

ಮಾಹಿತಿ ಹಕ್ಕು ಕಾಯ್ದೆಗೆ ಒಂದು ಸರ್ಕಾರವನ್ನು ಕೆಡುವ ಶಕ್ತಿ ಇದೆ. ಲಭ್ಯವಿರುವ ದಾಖಲೆಗಳನ್ನು ಮಾತ್ರ ಎಲೆಕ್ಟ್ರಾನಿಕ್ ಮಾದರಿಯಲ್ಲಿ ಲಭ್ಯವಿದ್ದಲ್ಲಿ ಅವುಗಳನ್ನು ಸಹ ನೀಡಬಹುದು. ಹೊಸದಾಗಿ ದಾಖಲೆ ಸೃಷ್ಠಿಸಿ ದಾಖಲೆ ನೀಡಲು ಅವಕಾಶವಿಲ್ಲ. ಕಂದಾಯ ಇಲಾಖೆ ಹಾಗೂ ಆರ್‌ಡಿಪಿಆರ್ ಇಲಾಖೆಗೆ ಸಂಬಂಧಿಸಿದಂತೆ ಆಯೋಗಕ್ಕೆ ಮೇಲ್ಮನವಿ ಬರುವುದೇ ಹೆಚ್ಚು. ಪಂಚತಂತ್ರ ವೆಬ್‌ಸೈಟ್‌ನಲ್ಲಿ ಮಾಹಿತಿಯನ್ನು ಪಾರದರ್ಶಕವಾಗಿ ಅನಾವರಣ ಮಾಡಿದರೆ ಬಹಳಷ್ಟು ಅರ್ಜಿಗಳು ಮೂಲ ಹಂತದಲ್ಲೇ ವಿಲೇವಾರಿಯಾಗುತ್ತದೆ. ಮಾಹಿತಿ ಹಕ್ಕು ಕಾಯ್ದೆಯಡಿ 4 (1ಎ) ಮತ್ತು 4(1ಬಿ) ಯಲ್ಲಿ ನಿಗದಿಪಡಿಸಿರುವ ವಿಷಯಗಳ ಬಗ್ಗೆ ವಿಷಯಗಳನ್ನು ಅನಾವರಣಗೊಳಿಸಿ. ಇದರಿಂದ ಬಹಳಷ್ಟು ಮಾಹಿತಿ ಹಕ್ಕು ಅರ್ಜಿಗಳ ಸಂಖ್ಯೆ ಕಡಿಮೆಯಾಗುತ್ತದೆ. ಇದರೊಂದಿಗೆ ಕಡತಗಳನ್ನು ನಿಯಮಾನುಸಾರ ಎ, ಬಿ, ಸಿ, ಡಿ ವರ್ಗೀಕರಣ ಮಾಡಿ ಎಂದು ಸಲಹೆ ನೀಡಿದರು.

ಮತ್ತೋರ್ವ ಆಯುಕ್ತ ಕೆ.ಬದ್ರುದ್ದೀನ್ ಮಾತನಾಡಿ, ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿರುವ ಅರ್ಜಿಯನ್ನು ಉಡಾಫೆ ಮಾಡಬೇಡಿ. ಅಧಿಕಾರಿಗಳು ಆರ್‌ಟಿಐ ಕಾಯ್ದೆಯ ಕುರಿತು ಮೊದಲು ಸಮರ್ಪಕವಾಗಿ ತಿಳಿದುಕೊಳ್ಳಿ. ಮಾಹಿತಿ ಹಕ್ಕು ಕಾಯ್ದೆಯ ಮೂಲ ಉದ್ದೇಶ ಆಡಳಿತದಲ್ಲಿ ಪಾರದರ್ಶಕತೆ ಕಾಪಾಡುವುದಾಗಿದೆ. ಅರ್ಜಿದಾರರು ಆರ್‌ಟಿಐ ನಡಿ ಮಾಹಿತಿ ಕೋರಿದ 30 ದಿನದೊಳಗಾಗಿ ಅಗತ್ಯ ಮಾಹಿತಿಯನ್ನು ನೀಡಬೇಕು ಎಂದರು.

ಮಾಹಿತಿ ಹಕ್ಕು ಕಾಯ್ದೆ ಅತ್ಯಂತ ಸರಳವಾಗಿದೆ. ಕಾಯ್ದೆಯನ್ನು ಓದಿ ಅರ್ಥೈಸಿಕೊಳ್ಳಿ. ಅರ್ಜಿದಾರರು ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಕೇಳಿರುವ ಮಾಹಿತಿಯನ್ನು ಒದಗಿಸಿ. ನೀಡಬಹುದಾದ ಹಾಗೂ ನೀಡಲಾಗದ ಮಾಹಿತಿ ಬೇರ್ಪಡಿಸಿ ಇಟ್ಟುಕೊಳ್ಳಿ. ಸಾರ್ವಜನಿಕರ ಅರ್ಜಿ ಓದಿ ನಿಮ್ಮ ವ್ಯಾಪ್ತಿಗೆ ಬರುತ್ತದೆಯೋ ಇಲ್ಲವೋ ಎಂದು ಮೊದಲು ಖಚಿತ ಪಡಿಸಿಕೊಳ್ಳಿ. ನಿಮ್ಮ ವ್ಯಾಪ್ತಿಗೆ ಬಾರದಿರುವುದನ್ನು ಸಂಬಂಧಪಟ್ಟ ಇಲಾಖೆಗೆ ಅರ್ಜಿ ಸಲ್ಲಿಕೆಯಾದ 5 ದಿನದೊಳಗಾಗಿ ವರ್ಗಾಯಿಸಿ ಅರ್ಜಿದಾರರ ಗಮನಕ್ಕೆ ತನ್ನಿ ಎಂದು ತಿಳಿ ಹೇಳಿದರು.

ಅಧಿಕಾರಿಗಳ ಕಣ್ತಪ್ಪಿನಿಂದ ಯಾವುದಾದರೂ ಮಾಹಿತಿ ನೀಡುವಲ್ಲಿ ಲೋಪ ಉಂಟಾದರೆ ಅರ್ಜಿದಾರರು ಪ್ರಥಮ ಮೇಲ್ಮನವಿ ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೆ ತನ್ನಿ. ಜಿಲ್ಲೆಗೆ ಸಂಬಂಧಿಸಿದಂತೆ 1,135 ಆಯೋಗದಲ್ಲಿ ಮೇಲ್ಮನವಿ ಅರ್ಜಿಗಳು ಬಾಕಿ ಇದೆ. ಎಲ್ಲ ಜಿಲ್ಲೆಗೆ ಹೋಲಿಸಿದರೆ ಮಂಡ್ಯದಲ್ಲಿ ಶೇ.3ರಷ್ಟು ಮಾತ್ರ ಇದೆ. ಇದು ಶೂನ್ಯಕ್ಕೆ ಬರಬೇಕು. ಅಧಿಕಾರಿಗಳು ಅರ್ಜಿ ಸಲ್ಲಿಸಿದವರಿಗೆ ಅಗತ್ಯ ಮಾಹಿತಿ ಒದಗಿಸಿ. ಒಂದು ವೇಳೆ ಮಾಹಿತಿ ಇಲ್ಲದಿದ್ದಲ್ಲಿ ಏಕೆ ಲಭ್ಯವಿಲ್ಲ ಎಂಬುದರ ಕುರಿತು ಅಗತ್ಯ ದಾಖಲೆಗಳೊಂದಿಗೆ ಮಾಹಿತಿ ಒದಗಿಸಿ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಮಾಹಿತಿ ಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದು ಆಧಿಕಾರಿಗಳ ಪ್ರಮುಖ ಕರ್ತವ್ಯ. ತಮ್ಮ ಕೆಲಸಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿದರೆ ಯಾವುದೇ ಭಯ ಪಡುವ ಅಗತ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತದ ನಿರ್ವಹಣೆ ಮಾಡುವುದು ಅಧಿಕಾರಿಗಳ ಹೊಣೆಗಾರಿಕೆ. ಜಿಲ್ಲೆಯ ಪ್ರಸಕ್ತ ಸಾಲಿನ 10 ಸಾವಿರಕ್ಕೂ ಹೆಚ್ಚು ಅರ್ಜಿ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾಗಿದೆ. ಈಗಾಗಲೇ 9 ಸಾವಿರಕ್ಕೂ ಹೆಚ್ಚು ಅರ್ಜಿಯನ್ನು ವಿಲೇವಾರಿ ಮಾಡಲಾಗಿದೆ. ನಿಗದಿತ ಅವಧಿಯಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿರುವ ಅರ್ಜಿ ವಿಲೇವಾರಿ ಮಾಡಿ. ಈ ಮೂಲಕ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಎಂದು ತಿಳಿಸಿದರು.

ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಆಫ್‌ಲೈನ್‌ನಲ್ಲಿ ಬರುವ ಅರ್ಜಿಗಳಿಗೆ ನೀಡುವ ಪ್ರಾಮುಖ್ಯತೆಯನ್ನು ಆನ್‌ಲೈನ್ ಅರ್ಜಿಗಳಿಗೂ ನೀಡಬೇಕು. ಬಹಳಷ್ಟು ಅಧಿಕಾರಿಗಳು ಆನ್‌ಲೈನ್‌ನಲ್ಲಿ ಬರುವ ಮಾಹಿತಿ ಹಕ್ಕು ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡುತ್ತಿಲ್ಲ ಎಂದರು.

ಸಂವಾದದಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಇ.ಗಂಗಾಧರಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net