

ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ ಜೋರಾಗಿಯೇ ನಡೆಯುತ್ತಿದೆ. ಆದರೆ ನುಡಿಜಾತ್ರೆ ಹೆಸರಿನಲ್ಲಿ ದುಂದುವೆಚ್ಚ ಮಾಡುವುದು ಬೇಡ. ಬದಲಿಗೆ ಸಾಹಿತ್ಯ, ನಾಡು ನುಡಿ ವಿಚಾರದಲ್ಲಿ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಹಿರಿಯ ಸಾಹಿತಿ ಡಾ.ಬೋರೇಗೌಡ ಚಿಕ್ಕಮರಳಿ ಸಲಹೆ ನೀಡಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ವಾರದ ಅತಿಥಿ ಸಂವಾದದಲ್ಲಿ ಮಾತನಾಡಿದ ಅವರು, ಕನ್ನಡ ಕಾರ್ಯಕ್ರಮಕ್ಕೆ ಹಣ ಖರ್ಚು ಮಾಡುವುದು ಖುಷಿ ವಿಚಾರ. ಹಾಗೆಂದು ದುಂದುವೆಚ್ಚ ಬೇಡ. ಮುಖ್ಯವಾಗಿ ನುಡಿಜಾತ್ರೆಯಲ್ಲಿ ವಿಚಾರಗೋಷ್ಠಿ, ಚರ್ಚೆ, ಸಾಹಿತ್ಯ ಚಟುವಟಿಕೆಯಲ್ಲಿ ಎಲ್ಲರೂ ತೊಡಗಿಸಿಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕು. ಸಮಕಾಲೀನ ವಿಚಾರದ ಬಗ್ಗೆ ಚರ್ಚೆಯಾಗುವುದರ ಜತೆಗೆ ಅದರ ಕುರಿತು ಮಾರ್ಗದರ್ಶನ ನೀಡುವಂತಾಗಬೇಕು. ಒಟ್ಟಾರೆ ಅರ್ಥಪೂರ್ಣವಾಗಿ ನುಡಿಜಾತ್ರೆ ಆಯೋಜನೆಗೊಳ್ಳುವಂತಾಗಬೇಕು ಎಂದರು.
ಹಕ್ಕು ಚಲಾಯಿಸುವುದು ಬೇಡ: ಮಂಡ್ಯದಲ್ಲಿ ನುಡಿಜಾತ್ರೆ ನಡೆಯುತ್ತಿದೆ ಎನ್ನುವ ಕಾರಣಕ್ಕೆ ಜಿಲ್ಲೆಯವರಿಗೆ ಸಮ್ಮೇಳನದ ಅಧ್ಯಕ್ಷತೆ ಕೊಡಬೇಕೆಂದು ಹಕ್ಕು ಚಲಾಯಿಸುವುದು ತಪ್ಪಾಗುತ್ತದೆ. ಹಾಗೆಂದ ಮಾತ್ರಕ್ಕೆ ಜಿಲ್ಲೆಯವರಿಗೆ ಕೊಡಬಾರದು ಎಂತಲ್ಲ. ಎಲ್ಲರ ಒಮ್ಮತದ ಅಭಿಪ್ರಾಯ ಸಂಗ್ರಹಿಸಿ ಅರ್ಹರಿಗೆ ಅವಕಾಶ ನೀಡಿದರೆ ಖುಷಿ ವಿಚಾರ. ಆದರೆ ನಮ್ಮವರೇ ಆಗಬೇಕೆನ್ನುವುದು ಬೇಡ ಎಂದು ಮನವಿ ಮಾಡಿದರು.
ಇನ್ನೊಂದೆಡೆ ಸಮ್ಮೇಳನಾಧ್ಯಕ್ಷತೆಯನ್ನು ಸಾಹಿತ್ಯೇತರರಿಗೂ ಕೊಡುವ ವಿಚಾರದ ಬಗ್ಗೆ ಪರ-ವಿರೋಧದ ಮಾತು ಕೇಳಿಬರುತ್ತಿವೆ. ಈ ನಿಟ್ಟಿನಲ್ಲಿ ಸಾಹಿತ್ಯ ಕ್ಷೇತ್ರದವರಿಗೆ ಅವಕಾಶ ಸಿಗಬೇಕೆನ್ನುವುದು ನನ್ನ ಅಭಿಪ್ರಾಯವೂ ಆಗಿದೆ. ಹಲವು ವರ್ಷ ಸಾಹಿತ್ಯ ಕ್ಷೇತ್ರದಲ್ಲಿ ದುಡಿದಿರುತ್ತಾರೆ. ತಮ್ಮ ಆದ ಕೊಡುಗೆ ನೀಡಿರುತ್ತಾರೆ. ಅವರಿಗೆ ಅಧ್ಯಕ್ಷತೆ ಕೊಡಬೇಕು. ಹಿಂದಿನಿಂದ ಇದೇ ಸಂಪ್ರದಾಯ ಬೆಳೆದುಕೊಂಡು ಬಂದಿದೆ. ಆದ್ದರಿಂದ ಅದನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಅಭಿಪ್ರಾಯಿಸಿದರು.
ಬೇರೆ ಭಾಷೆಗಳು ಎಷ್ಟೇ ದಾಳಿ ಮಾಡಿದರೂ ಕನ್ನಡದ ಅಸ್ಥಿತ್ವಕ್ಕೆ ಕುಂದು ಎದುರಾಗಲಿದೆ ಎನ್ನುವುದು ತಪ್ಪು. ನಮ್ಮ ಭಾಷೆಗೆ ಪ್ರಸ್ತುತ ದಿನದಲ್ಲಿ ಸವಾಲು ಎದುರಾಗಿರುವುದನ್ನು ಒಪ್ಪಿಕೊಳ್ಳುತ್ತೇವೆ. ಹಾಗೆಂದ ಮಾತ್ರಕ್ಕೆ ತೊಂದರೆ ಇದೆ ಎನ್ನುವುದನ್ನು ಒಪ್ಪಲಾಗುವುದಿಲ್ಲ ಎಂದ ಅವರು, ಈ ಬಾರಿಯ ನುಡಿಜಾತ್ರೆಗೆ ಯುವಸಮೂಹವನ್ನು ಕರೆತರುವ ನಿಟ್ಟಿನಲ್ಲಿ ಕೆಲಸವಾಗಬೇಕು. ಇದಕ್ಕೆ ಪೂರಕವಾಗಿ ಶೈಕ್ಷಣಿಕ ಸಂಸ್ಥೆಯಲ್ಲಿ ಚಟುವಟಿಕೆ ನಡೆಯಬೇಕು. ಆ ಮೂಲಕ ಅವರಲ್ಲಿ ಸಾಹಿತ್ಯಾಸಕ್ತಿಯನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್, ಮಾಜಿ ಅಧ್ಯಕ್ಷ ಕೃಷ್ಣ ಸ್ವರ್ಣಸಂದ್ರ ಇದ್ದರು.