ಎಲ್ಲ ಜಿಲ್ಲೆಯಲ್ಲೂ ರಂಗಾಯಣ ನಿರ್ಮಾಣವಾಗಲಿ: ರಂಗ ಕಲಾವಿದ ಮಂಡ್ಯ ರಮೇಶ್ ಅಭಿಮತ

Conversation at the Press Club Mandya
Published on

ಮಂಡ್ಯ: ರಾಜ್ಯದ ಎಲ್ಲ ಜಿಲ್ಲೆಯಲ್ಲೂ ರಂಗಾಯಣವಾಗಬೇಕು. ಜತೆಗೆ ಸಾಹಿತ್ಯ ಭವನಗಳಲ್ಲಿ ಕಡ್ಡಾಯವಾಗಿ ಮಕ್ಕಳಿಗೆ ಕಾವ್ಯ ವಾಚನ, ಸಂಗೀತ ಓದಿಸುವ ಕೆಲಸ ಆಗಬೇಕಿದೆ ಎಂದು ರಂಗ ಕಲಾವಿದ ಮಂಡ್ಯ ರಮೇಶ್ ಹೇಳಿದರು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ನಗರದ ಪ್ರೆಸ್‌ಕ್ಲಬ್‌ನಲ್ಲಿ ಜಿಲ್ಲಾ ಕಾರ್ಯನಿರತ ಸಂಘದಿಂದ ಆಯೋಜಿಸಿದ್ದ ವಾರದ ಅತಿಥಿ ಸಂವಾದದಲ್ಲಿ ಮಾತನಾಡಿದ ಅವರು, ಕಾದಂಬರಿ, ಸಾಹಿತ್ಯಗಳನ್ನು ನಾಟಕ, ಸಿನಿಮಾ ಆಗಿ ಪರಿವರ್ತಿಸುವುದನ್ನು ಮಕ್ಕಳಿಗೆ ಕಲಿಸಬೇಕಿದೆ. ಇಂದಿನ ಯುವ ಜನತೆಯನ್ನು ಕೌಶಲ ವೃದ್ಧಿಯಾಗುತ್ತಿದೆ. ಇದರ ಜತೆಗೆ ಸಾಹಿತ್ಯದ ಮನಸ್ಥಿತಿ ವೃದ್ಧಿಸುವ ಕೆಲಸ ಸಮ್ಮೇಳನದ ಗೋಷ್ಠಿಯಲ್ಲಿ ಆಗಬೇಕಿದೆ ಎಂದರು.

ಸಾಹಿತ್ಯ ಸಮ್ಮೇಳನಗಳು ಮಕ್ಕಳನ್ನು ಕನ್ನಡ ಓದಲು ಪ್ರೇರೇಪಿಸುವಂತಹ ಕೆಲಸ ಮಾಡಬೇಕು. ಸಮ್ಮೇಳನ ಸಾಹಿತಿಗಳನ್ನು ಮಾತ್ರವಲ್ಲ ಅಲ್ಲಿನ ಕಲೆಯನ್ನು ವೀಕ್ಷಿಸಲು ಬರುವ ಶಾಲಾ ಕಾಲೇಜಿನ ಯುವತಲೆಮಾರಿನ ಕೈಯಲ್ಲಿ ಪುಸ್ತಕವಿದ್ದರೆ, ಅದರ ಮೇಲಿನ ಪ್ರೀತಿ ಹೆಚ್ಚುತ್ತದೆ. ಈ ಮೂಲಕ ಮಕ್ಕಳಿಗೆ ಸಾಹಿತ್ಯ ಜ್ಞಾನದ ಮೂಲಕ ಜಗತ್ತಿನ ಮನಸ್ಸು ವಿಸ್ತರಿಸುವ ಕೆಲಸವಾಗಿ, ಪರಂಪರೆಯನ್ನು ದಾಖಲಿಸುವ ಕೆಲಸವಾಗಬೇಕು. ಸಿನಿಮಾ ಮತ್ತು ರಂಗಭೂಮಿಗಳು ಭೂಮಿಯಷ್ಟೇ ಆತಂಕದ ಸ್ಥಿತಿಯಲ್ಲಿದೆ. ಕನ್ನಡ ಸಾಹಿತ್ಯದ ಹಿನ್ನಲೆಯಲ್ಲಿ ಬಂದಂತ ಸಿನಿಮಾಗಳನ್ನು ಗುರುತಿಸುವ ಕೆಲಸವನ್ನು ಸಾಹಿತ್ಯ ಸಮ್ಮೇಳನದಲ್ಲಿ ನಡೆಯಬೇಕಿದೆ. ಒಳ್ಳೆಯದನ್ನು ಗಮನಿಸುವಲ್ಲಿ ನಾವು ಸೋಲುತ್ತಿದ್ದೇವೆ. ಈ ನಿಟ್ಟಿನಲ್ಲಿ ಸಮ್ಮೇಳನಗಳು ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದರು.

ಸಮ್ಮೇಳನದಲ್ಲಿ ಕಾರ್ಯಕ್ರಮ ನೀಡುವಂತೆ ಕರೆ ಬಂದರೆ ಒಂದು ದಿನ ಶಿಬಿರ ಆಯೋಜಿಸಿ, ರಂಗಭೂಮಿ ಸಾಹಿತ್ಯದ ಕುರಿತು ಮಾತನಾಡಿ, ಕೆಲಸ ಮಾಡಿ, ಸರ್ಕಾರವನ್ನೇ ಎದುರಿಸಿ ನಾಟಕ ಮಾಡುವಂತಹ ಕಾರ್ಯಕ್ರಮವನ್ನು ಮಾಡುತ್ತೇನೆ. ನನಗೆ ಮಂಡ್ಯ ಜಿಲ್ಲೆಯಿಂದ ದೊರೆತ ಪ್ರೀತಿ ಮುಂದಿನ ಜನ್ಮದಲ್ಲೂ ತೀರಿಸಲಾಗದು, ಮಣ್ಣಿಗೆ ಆಪ್ತ ಭಾವ, ತಾಯ್ತನವಿದ್ದು ಅದನ್ನು ಕಾಪಾಡಿಕೊಳ್ಳಲು ಇಷ್ಟ ಪಡುತ್ತೇನೆ ಎಂದರು.

ಒಂದು ಜಾಹೀರಾತಿಗೂ ಉತ್ತಮವಾದ ಸಾಹಿತ್ಯವಿಲ್ಲದೇ ಇದ್ದರೆ, ಅದು ಗಮನ ಸೆಳೆಯದು. ಕಾವ್ಯಾತ್ಮಕ ಗುಣ ಸಾಹಿತ್ಯದಲ್ಲಿ ಇರಬೇಕು. ಮಂಡ್ಯದಲ್ಲಿ ಕಾವ್ಯಾತ್ಮಕ ಸಾಹಿತ್ಯ ರಚಿಸುವ ಧೀಮಂತ ಸಾಹಿತಿಗಳಿದ್ದು, ಅವರಲ್ಲಿ ಬೆಸಗರಹಳ್ಳಿ ರಾಮಣ್ಣ, ಎಚ್.ಎಲ್.ಕೇಶವಮೂರ್ತಿ ಸೇರಿದಂತೆ ಹಲವರಿದ್ದಾರೆ. ಚಲನಚಿತ್ರದಲ್ಲೂ ಮಂಡ್ಯದವರ ಸಾಹಿತ್ಯದ ಪ್ರಭಾವ ಹೆಚ್ಚಿದೆ. ಪುಟ್ಟಣ್ಣ ಕಣಗಲ್ ಅವರ ಅದ್ಬುತ ಚಲನಚಿತ್ರಗಳಿಗೆ ಬೆನ್ನೆಲುಬಾಗಿ ಮಂಡ್ಯದ ಯೋಗಾನಂದ ಶಾಸ್ತ್ರಿಗಳ ಸಾಹಿತ್ಯ ಶಕ್ತಿ ತುಂಬಿದ್ದವು ಎಂದು ನೆನಪಿಸಿಕೊಂಡರು.

ಸಾಹಿತ್ಯೇತರರನ್ನು ಸಮ್ಮೇಳನಾಧ್ಯಕ್ಷರಾಗಿ ಮಾಡಿದರೆ ಅದು ಇಡೀ ಪ್ರಪಂಚಕ್ಕೆ ಮಾಡುವ ಮೋಸ, ಕಡ್ಡಾಯವಾಗಿ ಸಾಹಿತಿಗಳನ್ನೇ ಅದರಲ್ಲೂ ಪ್ರಬುದ್ಧರನ್ನ ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಬೇಕು. ಕನ್ನಡ ಸಾಹಿತ್ಯ ಸಮ್ಮೇಳನ ಆಗುತ್ತಿರುವ ದಿಸೆಯಿಂದ ಸಾಹಿತಿಗಳೇ ಸಮ್ಮೇಳನಾಧ್ಯಕ್ಷರಾಗಬೇಕೆಂಬುದು ನನ್ನ ವಾದ. ಸಾಹಿತಿಗಳಲ್ಲದೆ ರಾಜಕಾರಣಿಗಳು, ಮಠಾಧೀಶರು ಮತ್ಯಾರನ್ನಾದರು ಆಯ್ಕೆ ಮಾಡಿದರೆ ಅದು ಕನ್ನಡ ಜನಕ್ಕೆ ಮಾಡುವ ದೊಡ್ಡ ಮೋಸ. ಸಮ್ಮೇಳನಾಧ್ಯಕ್ಷರಾಗಲು ಕನ್ನಡದಲ್ಲಿ ತುಂಬ ಒಳ್ಳೆಯ ವ್ಯಕ್ತಿಗಳ ಹೆಸರುಗಳಿದ್ದು, ಅದನ್ನು ಬಿಟ್ಟು ಬೇರೆ ಕ್ಷೇತ್ರದವರನ್ನು ಆರಿಸಿಕೊಳ್ಳುವುದು ಸರಿಯಲ್ಲ. ಸಾಹಿತ್ಯ ಎಂಬುದು ಬದುಕಾಗಬೇಕು. ಬದುಕಿನಲ್ಲಿ ಸಾಹಿತ್ಯವಾಗಬೇಕು ಎಂದು ಹೇಳಿದರು.

ಕನ್ನಡದಲ್ಲಿ ವ್ಯಾಸಂಗ ಮಾಡಿದವರಿಗೆ ಜಾಗತಿಕವಾಗಿ ತಲುಪಲು ಬೇಕಾದ ಉದ್ಯೋಗ ನಿರ್ಮಾಣವಾಗಬೇಕಿದೆ. ಕಡ್ಡಾಯವಾಗಿ ಎಲ್ಲ ಶಾಲೆಗಳಲ್ಲಿ ಕನ್ನಡ ಕಲಿಸುವ ಶಿಕ್ಷಕರಿಗೆ ರಂಗಭೂಮಿಯ ಪರಿಚಯ ಮಾಡಿಸಿ ತರಬೇತಿ ನೀಡಬೇಕು. ಈ ಮೂಲಕ ಕನ್ನಡ ಶಿಕ್ಷಕರ ಸಂವಹನ ಗುಣ ಹೆಚ್ಚು ಮಾಡುವಂತ ಶಿಕ್ಷಣವನ್ನು ಸರ್ಕಾರ ಒದಗಿಸಬೇಕು. ಕನ್ನಡವನ್ನು ಉಳಿಸಿಕೊಳ್ಳಲು ತಾಲೂಕು ಕೇಂದ್ರದಲ್ಲಿ ರಂಗಮಂದಿರ ಸೃಷ್ಠಿಸಿ, ಅಲ್ಲಿ ಗ್ರಂಥಾಲಯ ರಚಿಸಿ ಎಲ್ಲ ರೀತಿಯ ಪುಸ್ತಕ ಒದಗಿಸಬೇಕು. ಈ ನಿಟ್ಟಿನಲ್ಲಿ ಸಾಹಿತ್ಯ ಸಮ್ಮೇಳನ ದಾರಿಯಾಗಬೇಕು ಎಂದು ಸಲಹೆ ನೀಡಿದರು.

ಸಂವಾದದಲ್ಲಿ ಸಂಘದ ಮಾಜಿ ಅಧ್ಯಕ್ಷ ಕೆ.ಎನ್.ರವಿ, ಪ್ರಧಾನ ಕಾರ್ಯದರ್ಶಿ ಆನಂದ್, ಖಜಾಂಚಿ ನಂಜುಂಡಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net