ಬಿಕ್ಕಟ್ಟಿಗೆ ಸಿಲುಕಿವೆ ಒತ್ತಡ ಹೇರುವ ದೇಶಗಳು: ಸಂಸ್ಕೃತಿ ಚಿಂತಕ ಡಾ.ರಹಮತ್ ತರೀಕೆರೆ ಅಭಿಮತ

Conversation at Pressclub Mandya
Published on

ಮಂಡ್ಯ: ಒಂದೇ ಸಂಸ್ಕೃತಿ, ನಾಯಕತ್ವ, ಧರ್ಮ, ಊಟ, ಸಿದ್ಧಾಂತವನ್ನು ಹೇರುವುದು ಅಪಾಯಕಾರಿ. ಇವುಗಳನ್ನು ಹೇರುವ ದೇಶಗಳು ಬಿಕ್ಕಟ್ಟಿಗೆ ಸಿಲುಕಿವೆ ಎಂದು ಲೇಖಕ, ಸಂಸ್ಕೃತಿ ಚಿಂತಕ ಡಾ.ರಹಮತ್ ತರೀಕೆರೆ ಅಭಿಪ್ರಾಯಪಟ್ಟರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಎಂ.ಆರ್.ಎಂ ಪ್ರಕಾಶನದ ವತಿಯಿಂದ ಆಯೋಜಿಸಿದ್ದ ಬಹುತ್ವ ಕರ್ನಾಟಕ ಕೃತಿ ಸಂವಾದದಲ್ಲಿ ಮಾತನಾಡಿದ ಅವರು, ಪ್ರತಿ ಸಮಾಜದಲ್ಲೂ ಹೊಸ ಬಿಕ್ಕಟ್ಟು ಬಂದಾಗ ಹೊಸ ಸ್ಟೇಟ್ಮೆಂಟ್ ಬಂದಿದೆ. ಧರ್ಮದ ಹೆಸರಿನಲ್ಲಿ ವಿಕಾರಗಳು ಹುಟ್ಟಿದಾಗ ಹೊಸ ಧರ್ಮಗಳು ಹುಟ್ಟಿವೆ. ಪ್ರಜಾಪ್ರಭುತ್ವವಿರುವ ರಾಷ್ಟ್ರಗಳಲ್ಲಿ ಸಾಮಾಜಿಕ ಪ್ರಜಾಭುತ್ವ ನಾಶವಾಗಿದೆ ಎಂದರು.

ವೈವಿಧ್ಯ ಇರುವುದು ದೊಡ್ಡ ಸಂಗತಿಯಲ್ಲ. ಆದರೆ ಅದನ್ನು ಸಂಭಾಳಿಸುವುದು ದೊಡ್ಡ ಸಂಗತಿ. ಬಹುತ್ವ ಏಕತ್ವದ ಕಡೆ ಮುಖ ಮಾಡಿರುವುದು ಅಪಾಯಕಾರಿ. ವಚನಕಾರರು ಸಂಸ್ಕೃತ ಪಳಗಿಸಿದರು. ನಮ್ಮದು ಹಲವು ಕನ್ನಡಂಗಳ್ ಎಂದು ಕವಿರಾಜ ಮಾರ್ಗ ಹೇಳಿದೆ. ವೈವಿಧ್ಯಮಯ ಭಾಷೆ ನಮ್ಮದು. ಭಾರತದ ದೊಡ್ಡತನ ಜಗತ್ತಿನ ಅತ್ಯುತ್ತಮವಾದದ್ದು ಬಂದಾಗಲೆಲ್ಲ ಸ್ವೀಕಾರ ಮಾಡಿದೆ. ವೇದಾಂತ ತಲೆ ಇಸ್ಲಾಂನ ದೇಹ ಕೂಡಿದರೆ ಭಾರತಕ್ಕೆ ಹೊಸ ನೆಲೆ ಬರುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಎಂ.ಆರ್.ಎಂ ಪ್ರಕಾಶನದ ಪ್ರಕಾಶಕ ಮಂಜು ಮುತ್ತೇಗೆರೆ ಮಾತನಾಡಿ, ಪ್ರತಿಯೊಬ್ಬರನ್ನು ಕೇಳುಗರನ್ನಾಗಿ ಮಾಡುವುದು. ಕೇಳುಗರನ್ನು ಓದುಗರನ್ನಾಗಿಸುವುದು. ಓದುಗರನ್ನು ಚಿಂತಕರನ್ನಾಗಿ ರೂಪಿಸುವುದೇ ನಮ್ಮ ಪ್ರಕಾಶನದ ಗುರಿ. ಹಾಗೆ ಮಾಡುವುದರಿಂದ ಬಹುತ್ವದ ಕನಸು ನನಸಾಗುವುದು ಎಂಬುದು ನನ್ನ ನಂಬಿಕೆ. ಇದೇ ಈ ಕಾರ್ಯಕ್ರಮದ ಆಶಯ. ನಾನಾ ಭಾಷೆ, ನಾನಾ ಸಂಸ್ಕೃತಿ, ನಾನಾ ಚಿಂತನೆ, ನಾನಾ ಕನಸುಗಳನ್ನೊಳಗೊಂಡ ನಮ್ಮ ದೇಶ ಒಗ್ಗೂಡುವುದು ಬಹುತ್ವದ ಪರಿಕಲ್ಪನೆಯಿಂದ ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

ಲೇಖಕ ಲೋಕೇಶ್ ಬೆಕ್ಕಳಲೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಾಹಿತಿ ಮಹೇಶ್ ಹರವೆ, ಕವಿ ಕೊತ್ತತ್ತಿ ರಾಜು, ಪ್ರಕಾಶಕ ಚಂದ್ರಶೇಖರ ದ.ಕೋ.ಹಳ್ಳಿ, ಲೋಕೇಶ್ ನೇರಲಕೆರೆ, ರಾಜೇಂದ್ರ ಪ್ರಸಾದ್ ಇತರರಿದ್ದರು. ಸಂವಾದದಲ್ಲಿ ಬಹುತ್ವ ಕರ್ನಾಟಕ ಕೃತಿಯನ್ನು ಓದಿದ 17 ಜನರು ತಮ್ಮ ಪ್ರಶ್ನೆಗಳಿಗೆ ಲೇಖಕರ ಬಳಿ ಪರಿಹಾರ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net