ಮಂಡ್ಯ ವಿವಿ ಆವರಣದಲ್ಲಿ ಸಮ್ಮೇಳನ ಆಯೋಜಿಸಿ: ಕಸಾಪ ಮಾಜಿ ಜಿಲ್ಲಾಧ್ಯಕ್ಷ ಜಿ.ಟಿ.ವೀರಪ್ಪ ಸಲಹೆ

Conversation at Pressclub Mandya
Published on

ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯ ವಿವಿ ಆವರಣದಲ್ಲಿ ಆಯೋಜಿಸುವುದು ಸೂಕ್ತ ಎಂದು ಕಸಾಪ ಮಾಜಿ ಜಿಲ್ಲಾಧ್ಯಕ್ಷ ಜಿ.ಟಿ.ವೀರಪ್ಪ ಸಲಹೆ ನೀಡಿದರು.

ಕಸಾಪ ಸಮ್ಮೇಳನ ಹಿನ್ನೆಲೆಯಲ್ಲಿ ನಗರದ ಪ್ರೆಸ್‌ಕ್ಲಬ್‌ನಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಬುಧವಾರ ಆಯೋಜಿಸಿದ್ದ ‘ವಾರದ ಸಾಹಿತ್ಯ ಸಂವಾದ’ದಲ್ಲಿ ಮಾತನಾಡಿದ ಅವರು, ಸಾಹಿತ್ಯ ಸಮ್ಮೇಳನ ಜಾತ್ರೆಯಲ್ಲ. ಜತೆಗೆ ಜನ ಸೇರಿಸುವುದೇ ಮುಖ್ಯ ಗುರಿಯಾಗಬಾರದು. ಆದರೆ ಸಾಹಿತ್ಯ ಕಾರ್ಯಕ್ರಮ ಸಾರ್ವಜನಿಕರಿಗೆ ತಲುಪುವ ದೃಷ್ಟಿಯಿಂದ ಮಂಡ್ಯ ವಿವಿ ಆವರಣದಲ್ಲಿ ಸಮ್ಮೇಳನ ನಡೆಸುವುದು ಸೂಕ್ತ ಎಂದರು.

1974ರಲ್ಲಿ ಮಂಡ್ಯದಲ್ಲಿ ಜಯದೇವಿ ತಾಯಿ ಲಿಗಾಡೆ ಅಧ್ಯಕ್ಷತೆಯಲ್ಲಿ 47ನೇ ಕನ್ನಡ ಸಾಹಿತ್ಯ ಸಮ್ಮೇಳನ ದಾಖಲೆ ಬರೆದಿದೆ. ಕೊಪ್ಪಳದಲ್ಲಿ ನಡೆದ 62ನೇ ಸಾಹಿತ್ಯ ಸಮ್ಮೇಳನದಲ್ಲಿ ಮಂಡ್ಯದಲ್ಲಿ ಸಮ್ಮೇಳನ ನಡೆಸಲು ಒಪ್ಪಿಗೆ ಸಿಕ್ಕಿತು. ನಂತರ ಮಂಡ್ಯಕ್ಕೆ ಬಂದು ಸಮ್ಮೇಳನ ಸಿದ್ಧತೆ ಆರಂಭಿಸಿದಾಗ ಅಂದಿನ ಶಾಸಕರು ಮತ್ತು ಜಿಲ್ಲಾ ಸಚಿವರ ಸಹಕಾರ ದೊರೆಯದ ಹಿನ್ನೆಲೆಯಲ್ಲಿ ಡಾ.ಜಿ.ಮಾದೇಗೌಡ ಮತ್ತು ಎಸ್.ಎಂ.ಕೃಷ್ಣ ತಮ್ಮ ಬೆಂಬಲಕ್ಕೆ ನಿಂತರು. ಅದೇ ರೀತಿ ಜಿಲ್ಲೆಯ ಜನರ ಸಹಕಾರ ಮರೆಯುವಂತಿಲ್ಲ ಎಂದು ಸ್ಮರಿಸಿದರು.

’ವಾರದ ಸಾಹಿತ್ಯ ಸಂವಾದ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಮ್ಮೇಳನದ ಸಮನ್ವಯ ಸಮಿತಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಸಾಹಿತ್ಯ ಕಾವ್ಯ ವಿದ್ವಾಂಸರ ಸ್ವತ್ತಾಗದೆ ಜನಸಾಮಾನ್ಯರ ಜೀವನಕ್ಕೂ ಪೂರಕವಾಗಿರಬೇಕು. ಈ ದೃಷ್ಟಿಯಿಂದ ಸಮ್ಮೇಳನ ಆಯೋಜಿತವಾಗಿದೆ. ಎಲ್ಲರ ಒತ್ತಾಸೆಯಂತೆ ಕಾರ್ಯಕ್ರಮ ಸಿದ್ಧತೆ ಆರಂಭವಾಗಿದೆ. ಕಸಾಪ, ಜಿಲ್ಲಾಡಳಿತ, ಜಿಲ್ಲಾ ಕಸಾಪ ಪದಾಧಿಕಾರಿಗಳು ಕನ್ನಡ ಭಾಷೆಯ ಸಾಹಿತ್ಯ ಸಮೃದ್ಧಿಗೆ ಮೀಸಲಾದ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಕನ್ನಡ ಪ್ರಜ್ಞೆ ವೃದ್ಧಿಸಲು ಹಲವು ಗಣ್ಯರ ಅನುಭವ ಪ್ರಚುರಪಡಿಸುವಲ್ಲಿ ಮಾಧ್ಯಮ ಮಿತ್ರರು ಮುಂದಾಗಿರುವುದು ಅಪೂರ್ವವಾದ ಕಾರ್ಯಕ್ರಮವಾಗಿದೆ. ಕನ್ನಡ ಪ್ರೇಮ ಜಾಗೃತಿಗೊಳಿಸಲು ಮಾಧ್ಯಮದ ಸಹಕಾರ ನಿರಂತರವಾಗಿರಲಿ ಎಂದು ಅಭಿಪ್ರಾಯಪಟ್ಟರು.

ಸಂವಾದದಲ್ಲಿ ಭಾಗವಹಿಸಿದ ಬಹುತೇಕ ಪತ್ರಕರ್ತರು, ಸಮ್ಮೇಳನವನ್ನು ಮಂಡ್ಯ ನಗರದಲ್ಲಿ ನಡೆಸುವುದು ಸೂಕ್ತ. ಜನ ಸೇರಿಸುವುದೇ ಮುಖ್ಯ ಗುರಿಯಾಗಬಾರದು. ಜತೆಗೆ ಇದು ಅಧಿಕಾರಿಗಳ ಸಮ್ಮೇಳನವಾಗದೆ ಜನಸಾಮಾನ್ಯರ ಸಮ್ಮೇಳನವಾಗಲಿ. ಕಸಾಪ ಅಧ್ಯಕ್ಷರೊಂದಿಗೆ ಸಂವಾದ ಏರ್ಪಡಿಸಿ ಎಂಬ ಅಭಿಪ್ರಾಯ ನೀಡಿದರು.

ಸಂವಾದ ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಸ್.ಎಚ್.ನಿರ್ಮಲಾ,ಹಿರಿಯ ಪತ್ರಕರ್ತ ಪಿ.ಜೆ.ಚೈತನ್ಯಕುಮಾರ್, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು, ಜಿಲ್ಲಾಧ್ಯಕ್ಷ ಬಿ.ಪಿ.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಆನಂದ್, ಉಪಾಧ್ಯಕ್ಷ ನವೀನ್‌ಕುಮಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net