ಜನರ ಆರ್ಥಿಕ ಸಧೃಡಕ್ಕೆ ಗ್ಯಾರಂಟಿ ನೆರವು: ಮೈಶುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ ಹೇಳಿಕೆ

Convention on Implementation of Guarantee Schemes Mandya
Published on

ಮಂಡ್ಯ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಜನರ ಆರ್ಥಿಕ ಸಬಲೀಕರಣಕ್ಕೆ ನೆರವಾಗಿವೆ ಎಂದು ಮೈಶುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ ಹೇಳಿದರು.

ತಾಲೂಕಿನ ದುದ್ದ ಗ್ರಾಮದಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನಗಳ ಕುರಿತ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳು ಪ್ರತಿ ಕುಟುಂಬಕ್ಕೆ ತಲುಪುವ ಮೂಲಕ ಆರ್ಥಿಕ ಶಕ್ತಿ ಸಿಕ್ಕಂತಾಗಿದೆ. ಗ್ಯಾರಂಟಿ ಯೋಜನೆಗಳಿಂದ ಪ್ರತಿಯೊಬ್ಬರ ತಲಾ ಆದಾಯ ರಾಷ್ಟ್ರದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಫಲಾನುಭವಿಗಳಿಗೆ ತಲುಪಿಸಿ ಆರ್ಥಿಕ ಶಕ್ತಿ ತುಂಬುತ್ತಿವೆ. ಹಳ್ಳಿಗಳಲ್ಲಿ ಮೈಕ್ರೋ ಫೈನಾನ್ಸ್ ಹಾವಳಿಗಳು ಸಾಮಾನ್ಯ ವ್ಯಕ್ತಿಗಳ ಶೋಷಣೆ ಮಾಡುತ್ತಿವೆ. ಇಂತಹ ಫೈನಾನ್ಸ್ ಹಾವಳಿಯನ್ನು ನಿಯಂತ್ರಣ ಮಾಡಬೇಕಿದೆ ಎಂದರು.

ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನಗಳ ಅನುಷ್ಠಾನ ಸಮಿತಿ ಸದಸ್ಯ ಎಚ್.ಎಂ.ಉದಯ್‌ಕುಮಾರ್ ಮಾತನಾಡಿ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರೇರಣೆಯಿಂದ ವಿವಿಧ ರಾಜ್ಯಗಳಲ್ಲಿ ಇದೇ ರೀತಿಯ ಯೋಜನೆಗಳನ್ನು ಅಲ್ಲಿನ ಸರ್ಕಾರಗಳು ಜಾರಿ ಮಾಡುತ್ತಿವೆ. ನಮ್ಮ ಗ್ಯಾರಂಟಿ ಯೋಜನೆಗಳ ಸ್ಥಿರತೆಗೆ ಇದು ಸಾಕ್ಷಿ. ಇದರಿಂದ ಯುವಕರು, ಮಹಿಳೆಯರು ಆರ್ಥಿಕ ಸಬಲತೆ ಹೊಂದಿದ್ದಾರೆ ಎಂದು ತಿಳಿಸಿದರು.

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಎಲ್ಲ ಅಧಿಕಾರಿಗಳು ಕೈ ಜೋಡಿಸಬೇಕು. ಗ್ರಾಮ ಪಂಚಾಯತಿ ಮಟ್ಟದಲ್ಲಿ ತಾಂತ್ರಿಕ ದೋಷಗಳನ್ನು ಸರಿಪಡಿಸಿ ಅರ್ಹ ಫಲಾನುಭವಿಗಳಗೆ ಯೋಜನೆಗಳು ಸಿಗುವಂತೆ ಎಲ್ಲರೂ ಕಾರ್ಯ ನಿರ್ವಹಿಸಬೇಕು. ಅಧಿಕಾರಿಗಳ ಸಹಕಾರದಿಂದ ದುದ್ದ ಹೋಬಳಿಯ 11 ಗ್ರಾಮ ಪಂಚಾಯಿತಿಯಲ್ಲಿ ಗ್ಯಾರಂಟಿ ಯೋಜನೆಗಳ ಸಮಸ್ಯೆ ಕುರಿತು ಸಭೆ ನಡೆಸಿ ಇದೀಗ ಸಮಾವೇಶ ಮಾಡುತ್ತಿದ್ದೇವೆ. ಜೂನ್ ತಿಂಗಳ ಗೃಹಲಕ್ಷ್ಮೀ ಯೋಜನೆಯ ಹಣವನ್ನು ವರಮಹಾಲಕ್ಷ್ಮೀ ಹಬ್ಬಕ್ಕೆ ನೀಡಲಾಗುತ್ತಿದೆ ಎಂದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕುಮಾರಸ್ವಾಮಿ, ವೆಂಕಟರಾಂ, ಚಂಪಕಮಾಲಿನಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net