ಪಾವಗಡ ಕ್ರೀಡಾಂಗಣದಲ್ಲಿ ಸೌಕರ್ಯ ಮರೀಚಿಕೆ

3
Published on


ಬಿ.ವಿ.ರಾಮಕೃಷ್ಣನಾಯಕ್​ ಪಾವಗಡ
ಒಲಿಂಪಿಕ್​ನಲ್ಲಿ ದೇಶಕ್ಕೆ ಗೋಲ್ಡ್​ ತರುವವರ್ಯಾರು ಎಂದು ಎಲ್ರೂ ಮಾತಾಡ್ತಾರೆ. ಆದರೆ ಒಲಿಂಪಿಕ್​ ಇರಲಿ ಹೋಬಳಿ, ತಾಲೂಕು, ಜಿಲ್ಲೆ, ರಾಜ್ಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಲೂ ಸಹ ಸ್ಥಳಿಯವಾಗಿ ಯಾರೂ ಪ್ರೋತ್ಸಾಹಿಸುವುದಿಲ್ಲ. ಕ್ರೀಡಾಂಗಣವೂ ಸರಿಯಾಗಿಲ್ಲ ಸರ್​.....! ಇದು ಪಾವಗಡ ತಾಲೂಕಿನ ಕ್ರೀಡಾಪಟುಗಳ ಅಳಲು.


ಹೌದು... ಪಟ್ಟಣದಲ್ಲಿನ ರಾಜೀವ್​ ಗಾಂಧಿ ಕ್ರೀಡಾಂಗಣದಲ್ಲಿ ಅವ್ಯವಸ್ಥೆ ತಾಂಡವಾಡುತ್ತಿದ್ದು, ಕುಡಿಯುವ ನೀರು ಸೇರಿ ಯಾವುದೇ ಸೌಕರ್ಯಗಳಿಲ್ಲದೆ ಕ್ರೀಡಾಪಡುಗಳು ಪರದಾಡುವಂತಾಗಿದೆ. ಪ್ರತಿ ವರ್ಷವೂ ಪ್ರಾಥಮಿಕ, ಪ್ರೌಢಶಾಲೆ ಸೇರಿ ಎಲ್ಲ ಶಾಲಾ&ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟಗಳು ಇದೇ ಕ್ರೀಡಾಂಗಣದಲ್ಲಿ ಆಯೊಜನೆಗೊಳ್ಳುತ್ತವೆ. ಕಳೆದೊಂದು ವಾರದಿಂದ ಇದೇ ಕ್ರೀಡಾಂಗಣದಲ್ಲಿ ಹೋಬಳಿ ಮಟ್ಟದ ಕ್ರೀಡಾಕೂಟಗಳು ಸಹ ನಡೆಯುತ್ತಿವೆ. ಆದರೆ ಕ್ರೀಡಾಂಗಣದಲ್ಲಿ ಕುಡಿಯುವ ನೀರು, ಶೌಚಗೃಹ, ವ್ಯಾಯಾಮ ಶಾಲೆ, ಹೆಣ್ಣು ಮಕ್ಕಳಿಗೆ ಪತ್ಯೇಕ ಕೊಠಡಿ, ರನ್ನಿಂಗ್​ ಟ್ರಾ$್ಯಕ್​ ಸೇರಿ ಯಾವ ಸೌಕರ್ಯಗಳೂ ಇಲ್ಲದೆ ಕ್ರೀಡಾಪಟು ಪರದಾಡುವಂತಾಗಿದೆ. ಪಟ್ಟಣದ ಕ್ರೀಡಾಂಗಣ ಅಭಿವೃದ್ಧಿಗೆ ಸಾಕಷ್ಟು ಬಾರಿ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಯಾರೂ ಈ ಬಗ್ಗೆ ಕಾಳಜಿ ತೋರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.


ಕುಡಿಯುವ ನೀರಿನ ಸಮಸ್ಯೆ: ಪಾವಗಡದ ಕ್ರೀಡಾಂಗಣದಲ್ಲಿ ಕಳೆದ ವಾರ ನಿಡಗಲ್​ ಹೋಬಳಿ ವ್ಯಾಪ್ತಿಯ ಪ್ರೌಢಶಾಲೆ ಹಂತದ ಕ್ರೀಡಾಕೂಟ ಆಯೋಜಿಸಲಾಗಿತ್ತು. ಹೋಬಳಿ ವ್ಯಾಪ್ತಿಯಲ್ಲಿ 15 ಪ್ರೌಢಶಾಲೆಗಳಿದ್ದು, ಪ್ರತಿ ಪ್ರೌಢಶಾಲೆಯಿಂದ 30&-40 ವಿದ್ಯಾರ್ಥಿಗಳು ಸೇರಿ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಎಲ್ಲ ಕ್ರೀಡಾರ್ಥಿಗಳು ಕುಡಿಯುವ ನೀರಿಲ್ಲದೆ ಪರದಾಡಿದರು.

ರಾತ್ರಿಯಾದ್ರೆ ಜೂಜುಕೋರರ ಅಡ್ಡೆ
ತಾಲೂಕು ಕ್ರೀಡಾಂಗಣದಲ್ಲಿ ಸೌಕರ್ಯಗಳ ಕೊರತೆ ಜತೆಗೆ ವ್ಯಾಯಾಮ ಶಾಲೆಯಲ್ಲಿ ಕೆಲ ಸಾಮಗ್ರಿಗಳಿದ್ದರೂ ಕೊಠಡಿಯ ಬಾಗಲೇ ತೆರೆಯುತ್ತಿಲ್ಲ. ಇನ್ನು ಬಾಕಿ ಕೆಲ ಕೋಠಡಿಗಳಿಗೆ ವಿದ್ಯುತ್​ ಸಂಪರ್ಕವೇ ಇಲ್ಲ. ಸರಿಯಾದ ನಿರ್ವಹಣೆ ಇಲ್ಲದೆ ಎಲ್ಲ ಕೊಠಡಿಗಳು ಸ್ಟೋರ್​ ರೂಮ್​ನಂತಾಗಿವೆ. ಅಲ್ಲದೇ ಕ್ರೀಡಾಂಗಣದಲ್ಲಿ ವಿದ್ಯುತ್​ ದೀಪಗಳ ವ್ಯವಸ್ಥೆ ಇಲ್ಲದ ಕಾರಣ ರಾತ್ರಿ ವೇಳೆ ಕ್ರೀಡಾಂಗಣವು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಡುತ್ತದೆ. ಆದರೂ ಕ್ರೀಡೆ ಮತ್ತು ಯುವ ಸಬಲೀಕರಣ ಇಲಾಖೆ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ಕ್ರೀಡಾಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಶೌಚಗೃಹವೂ ನಾಸ್ತಿ
ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಸೇರಿ ರಾಜ್ಯ ಹಾಗೂ ರಾಷ್ಟ್ರೀಯ ಹಬ್ಬಗಳು, ಜಿಲ್ಲೆ, ತಾಲೂಕು, ಹೋಬಳಿ ಮಟ್ಟದ ಕ್ರೀಡಕೂಟಗಳನ್ನು ಇದೇ ಕ್ರೀಡಾಂಗಣದಲಲ್ಲಿ ಆಯೋಜನೆ ಮಾಡಲಾಗುತ್ತದೆ. ಪ್ರತಿ ದಿನಾಚರಣೆ, ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಮಹಿಳೆ ಹಾಗೂ ವಿದ್ಯಾರ್ಥಿಗಳು, ಪ್ರತಿದಿನ ವಾಯುವಿಹಾರಕ್ಕೆಂದು ಕ್ರೀಡಾಂಗಣದ ಕಡೆ ಬರುವ ನಾಗರಿಕರು ಶೌಚಗೃಹ ಇಲ್ಲದೆ ಪರದಾಡುವಂತಾಗಿದೆ. ಪ್ರತಿ ಭಾರಿ ಜನಪ್ರತಿನಿಧಿಗಳು ಇದೇ ಕ್ರೀಡಾಂಗಣದಲ್ಲಿ ನಿಂತು ಪಟ್ಟಣದ ಅಭಿವೃದ್ಧಿಯ ಭಾಷಣ ಮಾಡುತ್ತಾರೆ. ಆದರೆ ಈವರೆಗೂ ಶಾಸಕರು, ಅಧಿಕಾರಿಗಳ ಕಣ್ಣಿಗೆ ಕ್ರೀಡಾಂಗಣದ ಅವ್ಯವಸ್ಥೆ ಕಾಣದಿರುವುದು ವಿಪರ್ಯಾಸ ಎಂದು ಪಟ್ಟಣದ ಕ್ರೀಡಾಪ್ರೇಮಿಗಳು ಸೇರಿದಂತೆ ನಾಗರಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಶೌಚಗೃಹ ಮತ್ತು ಕುಡಿಯುವ ನೀರಿನ ಸಮಸ್ಯೆ ಗಮನಕ್ಕೆ ಬಂದಿದೆ. ಕ್ರೀಡಾಂಣದ ಅಭಿವೃದ್ಧಿಗೆ 25 ಲಕ್ಷ ರೂ. ಅನುದಾನ ಮೀಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು, ಹಣ ಬಿಡುಗಡೆಗೊಳಿಸಿ, ಕ್ರೀಡಾಂಗಣ ಅಭಿವೃದ್ಧಿಗೆ ಕ್ರಮವಹಿಸಲಾಗುವುದು.> ಎಚ್​.ವಿ.ವೆಂಕಟೇಶ್​ ಶಾಸಕ ಪಾವಗಡ

ಪ್ರತಿ ವರ್ಷವೂ ಹೋಬಳಿ, ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಪಟ್ಟಣದ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗುತ್ತದೆ. ಕನಿಷ್ಠ ಸೌಲಭ್ಯ ಇಲ್ಲದೆ ಪರದಾಡಬೇಕು. ಕ್ರೀಡಾಂಗಣ ಅಭಿವೃದ್ಧಿಗೆ ಕ್ರಮವಹಿಸಬೇಕು. ಅದಕ್ಕೂ ಮುನ್ನ ಕ್ರೀಡಾಂಗಣದಲ್ಲಿ ಬೆಳೆದಿರುವ ಗಿಡ&ಗಂಟಿ ತೆರುವುಗೊಳಿಸಿ, ತ್ಯಾಜ್ಯದ ರಾಶಿ ವಿಲೇವಾರಿ ಮಾಡಿ.> ಹೆಸರು ಹೇಳಲು ಇಚ್ಛಿಸದ ಕ್ರೀಡಾಪಟು ಪಾವಗಡ ತಾಲೂಕು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net