

ಮದ್ದೂರು : ತಾಲೂಕಿನ ವೈದ್ಯನಾಥಪುರದ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಮತದಾನದ ಹಕ್ಕು ನೀಡುವ ವಿಚಾರವಾಗಿ ಎರಡು ಗುಂಪುಗಳ ಸದಸ್ಯರ ನಡುವೆ ವಿವಾದ ಉಂಟಾಗಿ ಬಿಗುವಿನ ಪರಿಸ್ಥಿತಿ ತಲೆದೋರಿದ ಹಿನ್ನೆಲೆಯಲ್ಲಿ ಬುಧವಾರ ನಡೆಯಬೇಕಾಗಿದ್ದ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ರದ್ದುಗೊಳಿಸಲಾಯಿತು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಉಭಯ ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಸಂಘದ ನೂತನ ನಿರ್ದೇಶಕರ ಆಯ್ಕೆ ಸಂಬಂಧ ಕಳೆದ ಆ.25ರಂದು ಚುನಾವಣೆ ನಿಗದಿ ಮಾಡಿ ಸಹಕಾರ ಸಂಘಗಳ ಉಪನಿಬಂಧಕರು ಆದೇಶ ಹೊರಡಿಸಿದ್ದರು. ಎಂ.ಕೆ.ತ್ಯಾಗರಾಜ ಪ್ರಸಾದ ಅವರನ್ನು ಚುನಾವಣೆ ಅಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ನಾಮಪತ್ರಗಳ ಸಲ್ಲಿಕೆ ಪ್ರಕ್ರಿಯೆ ಮುಗಿದ ನಂತರ ಆ.18ರಂದು ನಾಮಪತ್ರಗಳ ಪರಿಶೀಲನೆಯ ಕಾರ್ಯ ಹಮ್ಮಿಕೊಳ್ಳಲಾಗಿತ್ತು.
ಸಂಘದ ನಿರ್ದೇಶಕರ ಚುನಾವಣೆಯಲ್ಲಿ 91 ಸದಸ್ಯರ ಪೈಕಿ 15 ಸದಸ್ಯರು ಮೃತಪಟ್ಟಿದ್ದರು. ಉಳಿದ 76ಸದಸ್ಯರಿಗೆ ಮಾತ್ರ ಮತದಾನದ ಹಕ್ಕು ನೀಡಲಾಗಿತ್ತು. ಇದನ್ನು ವಿರೋಧಿಸಿದ ಉಭಯ ಗುಂಪುಗಳು ಒಂದು ವರ್ಷದ ಹಿಂದೆ ಸದಸ್ಯರಾಗಿರುವ ಷೇರುದಾರರಿಗೂ ಮತದಾನದ ಹಕ್ಕು ನೀಡುವಂತೆ ಪಟ್ಟು ಹಿಡಿದಿದ್ದರು.
ಈ ಸಂದರ್ಭದಲ್ಲಿ ಚುನಾವಣೆ ಅಧಿಕಾರಿ ತ್ಯಾಗರಾಜು ಹೊಸ ಸದಸ್ಯರಿಗೆ ಸಂಘದ ನಿಯಮದ ಪ್ರಕಾರ ಮತದಾನದ ಹಕ್ಕು ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಈ ವೇಳೆ ಗೊಂದಲ ಉಂಟಾಗಿ ಒಂದು ಗುಂಪು ಚುನಾವಣೆಗೆ ಸಲ್ಲಿಕೆಯಾಗಿದ್ದ ನಾಮಪತ್ರಗಳನ್ನು ದಾಖಲೆ ಸಮೇತ ಅಪಹರಿಸಿ ಹರಿದು ಹಾಕಿದ್ದರು. ಇದರಿಂದ ಚುನಾವಣೆಯನ್ನು ಮುಂದೂಡಲಾಗಿತ್ತು.
ಈ ಎಲ್ಲ ಗೊಂದಲಗಳ ನಡುವೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಬುಧವಾರ ಸಹಕಾರ ಸಂಘದ ಉಪನಿಬಂಧಕರ ಆದೇಶದಂತೆ ವಾರ್ಷಿಕ ಸಾಮಾನ್ಯ ಸಭೆಯನ್ನು ಇಲಾಖೆಯ ಆದೇಶದಂತೆ ನೇಮಕಗೊಂಡಿದ್ದ ವಿಶೇಷ ಅಧಿಕಾರಿ ಜಿ.ವಿ.ಮಂಜುನಾಥ್ ಅಧ್ಯಕ್ಷತೆಯಲ್ಲಿ ನಿಗದಿ ಮಾಡಲಾಗಿತ್ತು. ಈ ವೇಳೆ ಸಭೆಗೆ ನುಗ್ಗಿದ ಎರಡು ಗುಂಪುಗಳು ನಿರ್ದೇಶಕರ ಚುನಾವಣೆಯಲ್ಲಿ ಹೊಸ ಸದಸ್ಯರಿಗೂ ಮತದಾನದ ಹಕ್ಕು ನೀಡುವವರೆಗೆ ವಾರ್ಷಿಕ ಸಾಮಾನ್ಯ ಸಭೆಯನ್ನು ನಡೆಸದಂತೆ ಪಟ್ಟು ಹಿಡಿದು ಸಭೆಗೆ ಅಡ್ಡಿಪಡಿಸಿದರು.
ಇದರಿಂದ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಬಿಡುವಿನ ಪರಿಸ್ಥಿತಿ ಉಂಟಾಯಿತು. ನಂತರ ಸ್ಥಳಕ್ಕೆ ಧಾವಿಸಿದ ಸಿಪಿಐ ಶಿವಕುಮಾರ್ ಹಾಗೂ ಸಿಬ್ಬಂದಿ ಗುಂಪು ಚದುರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಪರಿಸ್ಥಿತಿಯ ಗಂಭೀರತೆ ಅರಿತ ವಿಶೇಷ ಅಧಿಕಾರಿ ಜಿ.ವಿ.ಮಂಜುನಾಥ್ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯನ್ನು ತಾತ್ಕಾಲಿಕವಾಗಿ ಮುಂದೂಡಿದರು.