ನಿಯಂತ್ರಣಕ್ಕೆ ಬಂದಿದೆ ಕರೊನಾ: ಸಚಿವ ಜೆ.ಸಿ.ಮಾಧುಸ್ವಾಮಿ

20 hu;iyar 1
Published on

ತುಮಕೂರು: ಜಿಲ್ಲೆಯಲ್ಲಿ ಕರೊನಾ ವೈರಸ್ ಹರಡುವಿಕೆ ನಿಯಂತ್ರಣಕ್ಕೆ ಬಂದಿದ್ದು, ಜಿಲ್ಲಾಡಳಿತ ಕರೊನಾ ನಿಯಂತ್ರಣಕ್ಕೆ ಎಲ್ಲ ರೀತಿಯಲ್ಲಿಯೂ ತಯಾರಿ ಮಾಡಿಕೊಂಡಿದೆ. ಆತಂಕ ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋ ಆಪರೇಟಿವ್ (ಟಿಎಂಸಿಸಿ) ವತಿಯಿಂದ ಪೊಲೀಸರಿಗೆ ನೀಡಿರುವ ಪಿಪಿಇ ಕಿಟ್ ಹಾಗೂ ಮಾಸ್ಕ್ ಗಳನ್ನು ಸೋಮವಾರ ಹಸ್ತಾಂತರಿಸಿ ಮಾತನಾಡಿದರು. ಕರೊನಾ ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದ್ದು, ಸೋಂಕಿತರ ಸಂಪರ್ಕದಲ್ಲಿರುವವರನ್ನು ಕಟ್ಟುನಿಟ್ಟಾಗಿ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ ಎಂದರು.

ಕ್ವಾರಂಟೈನ್ ನಿಯಮ ಉಲ್ಲಂಘಿಸುವವರ ಮೇಲೆ ಕ್ರಮ ಕೈಗೊಳ್ಳಲಾಗಿದೆ, ಅಷ್ಟೇ ಅಲ್ಲದೇ ರ‌್ಯಾಡಮ್ ಟೆಸ್ಟ್‌ಗೆ ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದು, ಇದರಿಂದ ಪ್ರಕರಣಗಳ ಸಂಖ್ಯೆ ಇನ್ನಷ್ಟು ಇಳಿಮುಖವಾಗುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬೆಂಗಳೂರಿನ ಪ್ರಯೋಗಾಲಯದಲ್ಲಿ ಬಾಕಿ ಉಳಿದಿದ್ದ ಗಂಟಲು ಮಾದರಿ ಪರೀಕ್ಷೆಯ ಫಲಿತಾಂಶ ಈಗ ಬರುತ್ತಿರುವುದರಿಂದ ಪ್ರಕರಣ ಹೆಚ್ಚಳವಾಗುತ್ತಿದೆ ಎನ್ನಿಸಬಹುದು. ಆದರೆ, ಹರಡುವಿಕೆ ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ಸಫಲವಾಗಿದೆ ಎಂದರು. ರೋಗ ಲಕ್ಷಣ ಕಂಡ ಬಂದ ತಕ್ಷಣ ವೈದ್ಯರ ಬಳಿ ತಪಾಸಣೆಗೆ ಒಳಪಟ್ಟರೆ, ಕರೊನಾ ರೋಗಿಗಳನ್ನು ಗುಣಮುಖರಾಗಿಸಬಹುದಾಗಿದ್ದು, ರೋಗಿಗಳಲ್ಲಿ ಇಮ್ಯುನಿಟಿ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗಿದೆ. ಕರೊನಾ ರೋಗಿಗಳಿಗೆ ಸಂಬಂಧಿಸಿದಂತೆ ಹಾಗೂ ಹೊರ ಜಿಲ್ಲೆಗಳಿಂದ ಬರುವವರ ಬಗ್ಗೆ ತಪ್ಪುಮಾಹಿತಿ ಹಾಗೂ ಮಾಹಿತಿಯನ್ನು ಮುಚ್ಚಿಟ್ಟವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

350ಪಿಪಿಇ ಕಿಟ್ ವಿತರಣೆ: ಟಿಎಂಸಿಸಿ ಬ್ಯಾಂಕ್ ಅಧ್ಯಕ್ಷ ಎನ್.ಎಸ್. ಜಯಕುಮಾರ್ ಮಾತನಾಡಿ, ಸೀಲ್‌ಡೌನ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರ ರಕ್ಷಣೆಯ ದೃಷ್ಟಿಯಿಂದ ಪಿಪಿಇ ಕಿಟ್‌ಗಳನ್ನು ನೀಡಲಾಗುತ್ತಿದೆ ಎಂದರು. ಕರೊನಾ ಸೋಂಕಿನಿಂದ ಜನರು ಹೆದರುತ್ತಿರುವ ಈ ಸಂದರ್ಭದಲ್ಲಿ ಜನರನ್ನು ರಕ್ಷಿಸುವ ಹೊಣೆ ಹೊತ್ತಿರುವ ಪೊಲೀಸರಿಗೆ ಬ್ಯಾಂಕ್ ವತಿಯಿಂದ 350 ಪಿಪಿಇ ಕಿಟ್ ನೀಡಲಾಗಿದೆ ಎಂದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ಬ್ಯಾಂಕ್ ಉಪಾಧ್ಯಕ್ಷ ಶ್ರೀಕರ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ವಂಶಿಕೃಷ್ಣ, ಎಎಸ್ಪಿ ಉದೇಶ್, ಡಿವೈಎಸ್ಪಿ ತಿಪ್ಪೇಸ್ವಾಮಿ ಮತ್ತಿತರರು ಹಾಜರಿದ್ದರು.

ಕರೊನಾ ಬಗ್ಗೆ ಗ್ರಾಮೀಣರಲ್ಲಿ ಅರಿವು ಬಂದಿದೆ, ಬೆಂಗಳೂರಿನಿಂದ ಬಂದವರಿಂದ ಸೋಂಕು ಜಾಸ್ತಿಯಾಗಿದ್ದು, ಹೊರಗಿನಿಂದ ಬರುವವರಿಗೆ ಪರೀಕ್ಷೆ ನಡೆಸಿ 48 ಗಂಟೆಯೊಳಗೆ ವರದಿ ನೀಡಲಾಗುವುದು, ಅಲ್ಲಿಯವರೆಗೆ ಗ್ರಾಮಗಳಿಗೆ ಬಿಟ್ಟುಕೊಳ್ಳುವುದು ಬೇಡ. ಜೆ.ಸಿ.ಮಾಧುಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net