ದ.ಕ. ಕೋವಿಡ್ ನಿಯಂತ್ರಣ ಸವಾಲು

covid
Published on

ವೇಣುವಿನೋದ್ ಕೆ.ಎಸ್. ಮಂಗಳೂರು

ಹಲವು ಕಟ್ಟುನಿಟ್ಟಿನ ಕ್ರಮಗಳ ಹೊರತಾಗಿಯೂ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲೇ ಅತ್ಯಧಿಕ ಕೋವಿಡ್ ಪ್ರಕರಣಗಳೊಂದಿಗೆ ಮುಂದುವರಿಯುತ್ತಿದೆ. ರಾಜ್ಯದಲ್ಲಿ ಅತ್ಯಧಿಕ ಸೋಂಕು ಇರುವ ಗ್ರಾಮೀಣ ಭಾಗದ ಟಾಪ್ 20ರ ಪಟ್ಟಿಯಲ್ಲಿ ಜಿಲ್ಲೆಯ 11 ಪ್ರದೇಶಗಳಿವೆ ಎಂದು ಇತ್ತೀಚೆಗಷ್ಟೇ ತಜ್ಞರ ವರದಿಯೊಂದು ತಿಳಿಸಿದೆ.

ಜಿಲ್ಲೆಯಲ್ಲಿ ಪ್ರತಿದಿನ ನಿರಂತರವಾಗಿ 300ರ ಮೇಲೆಯೇ ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿರುವುದು ಮತ್ತು ಸಾವು ಪ್ರಕರಣಗಳು ಮುಂದುವರಿಯುತ್ತಿರುವುದು ಜಿಲ್ಲಾಡಳಿತದ ನಿದ್ದೆಗೆಡಿಸಿದೆ. ಇದೇ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಡಾ.ಸುಧಾಕರ್ ಮಂಗಳೂರು ಭೇಟಿ ವೇಳೆ ಹೋಂ ಐಸೊಲೇಶನ್ ಕೈ ಬಿಟ್ಟು ಕೋವಿಡ್ ಆರೈಕೆ ಕೇಂದ್ರಗಳಿಗೆ ಸೋಂಕಿತರನ್ನು ವರ್ಗಾಯಿಸಲು ಸೂಚಿಸಿದ್ದರು.

ಯಾವುದು 11 ಪ್ರದೇಶ?: ಆ.12ರಂದು ಬಿಡುಗಡೆಯಾಗಿರುವ ಕೋವಿಡ್ ವಾರ್‌ರೂಂ ತಜ್ಞರ ವರದಿ ಪ್ರಕಾರ, ರಾಜ್ಯದ ಗ್ರಾಮೀಣ ಭಾಗದ ಹೆಚ್ಚು ಕೋವಿಡ್ ಹೊಂದಿರುವ ಟಾಪ್ 20ರ ಪಟ್ಟಿಯಲ್ಲಿ ಜಿಲ್ಲೆಯ 11 ಪ್ರದೇಶಗಳಿವೆ. ಕಂದಾವರ, ಕಲ್ಮಕಾರು, ಗುತ್ತಿಗಾರು, ಮೇಲಂತಬೆಟ್ಟು, ಅಜ್ಜಾವರ, ಕೊಂಡೆಮೂಲೆ, ತೋಡಾರು, ಕಡಬ, ಕೊಲ್ನಾಡು, ಮಂಗಳೂರು ಗ್ರಾಮಾಂತರ ಹಾಗೂ ಕೊಣಾಜೆ ಗ್ರಾಮೀಣ ಪ್ರದೇಶಗಳು. ಉಡುಪಿ ಜಿಲ್ಲೆಯ ನೀರೆ, ಅಲ್ಪಾಡಿ, ನಿಟ್ಟೆ, ಕೋಟೇಶ್ವರ, ಬಡಗಬೆಟ್ಟು ಕೂಡ ಟಾಪ್ 20ಯಲ್ಲಿ ಸ್ಥಾನ ಪಡೆದಿವೆ.

ಪಟ್ಟಣದ ಪಟ್ಟಿಯಲ್ಲಿ ಬೆಳ್ತಂಗಡಿ, ಉಳ್ಳಾಲ, ಪುತ್ತೂರು, ಕೋಟೆಕಾರು, ಮೂಡುಬಿದಿರೆ ಸಹಿತ ದ.ಕ. ಜಿಲ್ಲೆಯ ಐದು ಹೆಸರುಗಳಿವೆ.

ಪಾಸಿಟಿವಿಟಿ ರೇಟ್‌ನಲ್ಲೂ ನಂ.1: ದ.ಕ. ಜಿಲ್ಲೆ ಸದ್ಯ ರಾಜ್ಯದಲ್ಲೇ ಅಧಿಕ ಪ್ರಕರಣ, ಅಧಿಕ ಪಾಸಿಟಿವಿಟಿ ದರ (ಶೇ.4.08) ಹೊಂದಿರುವ ಜಿಲ್ಲೆ. ಎರಡನೇ ಅತಿ ಹೆಚ್ಚು ಸಕ್ರಿಯ ಪ್ರಕರಣಗಳು (3595) ಇಲ್ಲಿವೆ. ಹೋಂ ಐಸೊಲೇಶನ್‌ನಲ್ಲೂ ಅತಿ ಹೆಚ್ಚು ಮಂದಿ(2902) ಇಲ್ಲಿದ್ದಾರೆ. ಸೋಂಕಿತರು ಹೋಂ ಐಸೊಲೇಶನ್‌ನಲ್ಲಿರುವುದೂ ಸೋಂಕು ಹರಡುವುದಕ್ಕೆ ಕಾರಣವಾಗುತ್ತಿದೆ, ಇದಕ್ಕಾಗಿ ಕೋವಿಡ್ ಕೇರ್ ಕೇಂದ್ರಗಳಿಗೆ ಅವರನ್ನು ವರ್ಗಾಯಿಸುವುದು ಸೂಕ್ತ ಎಂದು ಸಿಎಂ ಹೇಳಿದ್ದರು. ಉಡುಪಿ ಜಿಲ್ಲೆಯಲ್ಲಿ 1061 ಮಂದಿ ಹೋಂ ಐಸೊಲೇಶನ್‌ನಲ್ಲಿದ್ದಾರೆ.

ಆರೈಕೆ ಕೇಂದ್ರಕ್ಕೆ ಸೇರಿಸಲು ಯತ್ನ: ದ.ಕ. ಜಿಲ್ಲೆಯಲ್ಲಿ ಮನೆಯಲ್ಲೇ ಇರುವ 2902 ಮಂದಿ ಸೋಂಕಿತರಲ್ಲಿ ಶೇ.50ರಷ್ಟು ಮಂದಿಯನ್ನಾದರೂ ಆರೈಕೆ ಕೇಂದ್ರಗಳಿಗೆ ವರ್ಗಾಯಿಸುವುದಕ್ಕೆ ಆರೋಗ್ಯ ಇಲಾಖೆ ಸದ್ಯ ಯತ್ನದಲ್ಲಿದೆ. ಆದರೆ ಜನರು ಒಪ್ಪುತ್ತಿಲ್ಲ ಎನ್ನುವುದು ಅಧಿಕಾರಿಗಳ ಅಳಲು. ಸೋಂಕಿತರು ಆರೋಗ್ಯವಂತರಾಗಿರಬಹುದು, ಆದರೆ ಅವರ ಮನೆಯಲ್ಲಿ ಹಿರಿಯರು ಅಥವಾ ಸಮಸ್ಯೆ ಇರುವವರಿಗೆ ಹರಡುವ ಸಾಧ್ಯತೆ ಅಧಿಕ, ಅವರಿಗೆ ಇದು ಮಾರಕವಾಗಬಹುದು. ಅಲ್ಲದೆ ಹೊರಗೆ ಹೋಗುವುದಿಲ್ಲ ಎಂದು ಹೇಳಿಕೊಂಡರೂ ಸೋಂಕಿತರು ಕೆಲವೊಮ್ಮೆ ಹೊರಗೆ ತಿರುಗಾಡಲು ಹೋಗುವುದರಿಂದ ಹರಡುವ ಸಾಧ್ಯತೆ ಇದೆ ಎನ್ನುತ್ತಾರೆ ವೈದ್ಯರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net