

ಕೋಟ: ಕೋಡಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ. ಇದರಿಂದ ಶಾಲಾ ಮಕ್ಕಳು ಸೇರಿದಂತೆ ಹಿರಿಯರು ಸಂಚರಿಸಲು ಆತಂಕ ಪಡುವಂತಾಗಿದೆ. ಬೀದಿನಾಯಿಗಳ ನಿಯಂತ್ರಣಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು.
ಕೋಡಿ ಗ್ರಾಮ ಪಂಚಾಯಿತಿ ಗ್ರಾಮಸಭೆ ಪಂಚಾಯಿತಿ ಅಧ್ಯಕ್ಷೆ ಗೀತಾ ಖಾರ್ವಿ ಅಧ್ಯಕ್ಷತೆಯಲ್ಲಿ ಕೋಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಸೋಮವಾರ ನಡೆಯಿತು. ಸಭೆಯಲ್ಲಿ ಸದಸ್ಯರು ಹಾಗೂ ಗ್ರಾಮಸ್ಥರು ಬೀದಿನಾಯಿ ಹಾವಳಿಯ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಮಾತನಾಡಿ, ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂತಾನ ಶಕ್ತಿ ಹರಣ ಕ್ರಮಗಳ ಹೊರತಾಗಿ ಸ್ಥಳೀಯಾಡಳಿತ ಬೇರೆ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ. ಈ ಕುರಿತು ಜಿಲ್ಲಾಡಳಿತಕ್ಕೆ ಲಿಖಿತ ಮಾಹಿತಿ ನೀಡಿ ಪರಿಹಾರ ಕಂಡುಕೊಳ್ಳಲು ಸಭೆಗೆ ತಿಳಿಸಿದರು.
ಕೋಡಿ ಕನ್ಯಾಣದ ಅಂಗನವಾಡಿ ಕಟ್ಟಡ ನವೀಕರಿಸಬೇಕಾದರೆ ಸ್ವಂತ ಸ್ಥಳದ ಮಾನ್ಯತೆ ನೀಡಿ ಕನಿಷ್ಠ ಪಕ್ಷ ಮೂರು ಸೆಂಟ್ಸ್ ಸ್ಥಳವಾಗಿ ಮಾರ್ಪಾಡುಗೊಳಿಸಿ ಎಂದು ಅಂಗನವಾಡಿ ಕಾರ್ಯಕರ್ತೆ ಗ್ರಾಮಲೆಕ್ಕಿಗರಲ್ಲಿ ಮನವಿ ಮಾಡಿದರು. ಇದಕ್ಕೆ ಪಂಚಾಯಿತಿ ಸದಸ್ಯರಾದ ಪ್ರಭಾಕರ್ ಮೆಂಡನ್ ಹಾಗೂ ಕೃಷ್ಣ ಪೂಜಾರಿ ಧನಿಗೂಡಿಸಿದರು. ಉತ್ತರಿಸಿದ ಗ್ರಾಮಲೆಕ್ಕಿಗ ಗಿರೀಶ್, ಈ ಬಗ್ಗೆ ಪರಿಶೀಲಿಸಿ ಮೂರು ಸೆಂಟ್ಸ್ ಸ್ಥಳ ನಿಗದಿಗೆ ಸಹಕಾರ ನೀಡುವುದಾಗಿ ತಿಳಿಸಿದರು.
ಅಂಗನವಾಡಿ ಸಹಾಯಕಿಯರನ್ನು ನೇಮಿಸಿ: ಕೋಡಿ ಗ್ರಾಪಂ ವ್ಯಾಪ್ತಿಯ ಹೊಸಬೇಂಗ್ರೆ ಹಾಗೂ ಕೋಡಿತಲೆ ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿಯರಿಲ್ಲದೆ ಅಲ್ಲಿನ ಅಂಗನವಾಡಿ ಕಾರ್ಯಕರ್ತೆಯರು ಸಮಸ್ಯೆ ಎದುರಿಸುತ್ತಿದ್ದಾರೆ. ಶೀಘ್ರವೇ ಸಹಾಯಕಿಯರನ್ನು ನೇಮಿಸಿಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯನ್ನು ಆಗ್ರಹಿಸಿಲಾಯಿತು. ರಸ್ತೆ ಸಮಸ್ಯೆಗಳ ಕುರಿತು ಗ್ರಾಮಸ್ಥರು ಸಭೆಯಲ್ಲಿ ಗಮನ ಸೆಳೆದರು.
ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖೆಗಳಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಪಂಚಾಯಿತಿ ಉಪಾಧ್ಯಕ್ಷ ಪ್ರಸಾದ್, ಸದಸ್ಯರು ಉಪಸ್ಥಿತರಿದ್ದರು. ನೋಡಲ್ ಅಧಿಕಾರಿಯಾಗಿ ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೆಶಕ ರೋಶನ್ ಭಾಗವಹಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಸಭೆ ನಿರ್ವಹಿಸಿದರು.
ಕೋಡಿ ಸೇತುವೆ ಭಾಗ ಸೇರಿದಂತೆ ಕೆಲವು ಭಾಗಗಳಲ್ಲಿ ರಾತ್ರಿ ಹೊತ್ತಿನಲ್ಲಿ ಮದ್ಯಪಾನಿಗಳ ಸಂಖ್ಯೆ ಹೆಚ್ಚಾಗಿದ್ದು, ಪ್ರದೇಶ ಮಲಿನವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಿದ್ದು, ಪೊಲೀಸ್ ಇಲಾಖೆ ರಾತ್ರಿ ಹೊತ್ತಿನಲ್ಲಿ ರೌಂಡ್ಸ್ ವ್ಯವಸ್ಥೆ ಬಿಗಿಗೊಳಿಸಬೇಕೆಂದು ಗ್ರಾಮಸಭೆ ಆಗ್ರಹಿಸಿತು. ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಕೋಟ ಪೊಲೀಸ್ ಠಾಣೆಯ ಎಎಸ್‌ಐ ರವಿಕುಮಾರ್ ಭರವಸೆ ನೀಡಿದರು.