

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ
ಭತ್ತದ ಕಟಾವು ಯಂತ್ರದ ಬಾಡಿಗೆ ದರ ಹಿಂದಿನ ವರ್ಷಗಳಿಗಿಂತಲೂ ಹೆಚ್ಚಾಗಿದೆ. ರೈತರ ಹಿತದೃಷ್ಟಿಯಿಂದ ಇದರ ನಿಯಂತ್ರಿಸಬೇಕಿದ್ದು, ಸಂಬಂಧಿಸಿದ ಪ್ರಾಧಿಕಾರಗಳು ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಕಾಡೂರು ಗ್ರಾಮಸ್ಥರು ಆಗ್ರಹಿಸಿದರು.
ಕಾಡೂರು ಗ್ರಾಮ ಪಂಚಾಯಿತಿ ವತಿಯಿಂದ ಗುರುವಾರ ನಡೆದ ಮೊದಲ ಹಂತದ ಗ್ರಾಮಸಭೆಯಲ್ಲಿ ಒತ್ತಾಯಿಸಲಾಯಿತು.
ತಂತ್ರಾಡಿ ಚಂದ್ರಶೇಖರ ಭಟ್, ಗ್ರಾಮ ಪಂಚಾಯಿತಿ ಸದಸ್ಯ ರಘುರಾಮ ಶೆಟ್ಟಿ ಮಾತನಾಡಿ, ಅಕಾಲಿಕ ಮಳೆ ಹಾಗೂ ಕಾಡುಪ್ರಾಣಿಗಳ ಹಾವಳಿಯ ನಡುವೆ ಬೆಳೆ ರಕ್ಷಣೆ ಸವಾಲಾಗಿದ್ದು, ಕೃಷಿ ಮೇಲೆ ಸುರಿದ ಹಣ ನಷ್ಟಕ್ಕೊಳಗಾಗುತ್ತಿದೆ. ಈ ಕುರಿತು ಆಡಳಿತ ವರ್ಗ ಗಮನಿಸಬೇಕು ಎಂದರು.
ಮಂದಾರ್ತಿ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್ ನೇತ್ರದಾನದ ಮಹತ್ವದ ಕುರಿತು ಮಾಹಿತಿ ನೀಡಿದ್ದು, ಕಣ್ಣಿನ ದಾನದ ಕುರಿತು ಜನರಲ್ಲಿ ಹೆಚ್ಚಿನ ಜಾಗೃತಿ ಅಗತ್ಯವಿದೆ. ತಂತ್ರಾಂಶ ಮೂಲಕ ನೋಂದಾಯಿಸಿಕೊಂಡು ಈ ಕುರಿತು ಹೆಚ್ಚಿನವರು ತಿಳಿದುಕೊಳ್ಳಲೇಬೇಕು ಎಂದರು.
ನೋಡಲ್ ಅಧಿಕಾರಿ ನಾಗರಾಜ್ ಮಾತನಾಡಿ, ಗ್ರಾಮಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರೊಂದಿಗೆ ವಿಷಯಾಧಾರಿತ ಅರ್ಥಪೂರ್ಣ ಚರ್ಚೆ ಹಾಗೂ ಪರಿಣಾಮಕಾರಿ ಅನುಷ್ಠಾನ ಸಾಧ್ಯ ಎಂದರು.
ಕಾಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಲಂಧರ್ ಶೆಟ್ಟಿ ಮಾತನಾಡಿದರು. ಉಪಾಧ್ಯಕ್ಷೆ ಪ್ರಭಾವತಿ, ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷೆ ವೀಣಾ, ಸದಸ್ಯರಾದ ರಘುರಾಮ ಶೆಟ್ಟಿ, ಪಾಂಡುರಂಗ ಶೆಟ್ಟಿ, ವಿಜಯ ಮರಕಾಲ, ಅಮಿತಾ, ಅಮ್ಮಣ್ಣಿ, ಗುಲಾಬಿ, ಗಿರಿಜಾ, ಗಿರೀಶ್, ಸತೀಶ್, ಎಸ್‌ಎಲ್‌ಆರ್‌ಎಂ, ಸಿಬ್ಬಂದಿ ಉಪಸ್ಥಿತರಿದ್ದರು. ಪಿಡಿಒ ಮಹೇಶ್ ಕೆ. ಮನ್‌ರೇಗಾ ಯೋಜನೆ ಕುರಿತು ಮಾಹಿತಿ ನೀಡಿ ವಂದಿಸಿದರು.
ಸಾಕ್ಷರತಾ ತಂಡದ ಮುಖ್ಯಸ್ಥರಾದ ಮೀರಾ ಮತ್ತು ಅರ್ಪಿತಾ ಬ್ಯಾಂಕಿಂಗ್ ಸಾಕ್ಷರತೆ ಕುರಿತು ಮಾಹಿತಿ ನೀಡಿ, ವಿಮಾ ಯೋಜನೆಯ ಮಾಹಿತಿ ಪಡೆಯುವುದು ಮತ್ತು ನಕಲಿ ಕರೆಗಳ ಹಾವಳಿ ಕುರಿತು ಜಾಗೃತಿ ವಹಿಸಿ ಸುರಕ್ಷಿತ ಬ್ಯಾಂಕಿಂಗ್ ಮಾಡುವ ನಿಟ್ಟಿನಲ್ಲಿ ಗ್ರಾಮೀಣ ಜನರು ಎಚ್ಚರಿಕೆ ವಹಿಸಬೇಕು ಎಂದರು.
ಡಾಕ್ಟರೇಟ್ ಪದವಿ ಪಡೆದ ತಂತ್ರಾಡಿಯ ರಮೆಶ್ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಕಂದಾಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅರಣ್ಯ, ಕೃಷಿ, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡಿದರು.
ಭತ್ತ ಕಟಾವು ಯಂತ್ರಗಳ ಲಭ್ಯತೆ ಕುರಿತು ಕರಾವಳಿಯಲ್ಲಿ ಸ್ಥಳೀಯವಾಗಿ ಸಂಘ ಸಂಸ್ಥೆಗಳ ಮೂಲಕವೂ ಕ್ರಮ ಕೈಗೊಳ್ಳಬೇಕಾದ ಕಾಲ ಸನ್ನಿಹಿತವಾಗಿದ್ದು, ಈ ಬಗ್ಗೆ ಗಂಭೀರ ಚಿಂತನೆ ಅಗತ್ಯ. -ಜಲಂಧರ್ ಶೆಟ್ಟಿ, ಕಾಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ https://www.vijayavani.net/durga-garden-provides-opportunity-to-locals https://www.vijayavani.net/mallyaramath-temple