

ಶಿರಹಟ್ಟಿ: ಮುಂಗಾರು ಬೆಳೆ ನಾಶ ಮಾಡುತ್ತಿರುವ ಜಿಂಕೆ ಮತ್ತು ಮಂಗಗಳ ಹಾವಳಿ ತಡೆಗಟ್ಟಿ ರೈತರ ಬೆಳೆ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗೊಜನೂರ, ಮಾಗಡಿ ಗ್ರಾಮಗಳ ರೈತರು ಶುಕ್ರವಾರ ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ರೈತ ಸಂಘಟನೆ ಲಕ್ಷ್ಮೇಶ್ವರ ತಾಲೂಕು ಘಟಕದ ಅಧ್ಯಕ್ಷ ಚೆನ್ನಪ್ಪ ಷಣ್ಮುಖಿ ಮಾತನಾಡಿ, ಮಳೆ ಇಲ್ಲದ ಸಂದರ್ಭದಲ್ಲೂ ರೈತರು ಧೈರ್ಯ ಮಾಡಿ ಹೆಸರು, ಗೋವಿನಜೋಳ, ಶೇಂಗಾ ಬಿತ್ತನೆ ಮಾಡಿದ ಬಳಿಕ ಮಳೆರಾಯನ ಕೃಪೆಯಿಂದ ಭೂಮಿಯಲ್ಲಿ ಬೆಳೆ ಚಿಗುರಲು ಆರಂಭಿಸಿದೆ. ಆದರೆ ನಿತ್ಯ ತಂಡೋಪತಂಡವಾಗಿ ಆಗಮಿಸುವ ಜಿಂಕೆ(ಚಿಗರಿ) ಮತ್ತು ಮಂಗಗಳು ಬೆಳೆಯನ್ನು ತಿಂದು ನಾಶ ಮಾಡುತ್ತಿವೆ. ರೈತರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಹೊಲಗಳಿಗೆ ಭೇಟಿ ನೀಡಿ ಹಾಳಾದ ಬೆಳೆಗಳ ಪರಿಸ್ಥಿತಿ ಅವಲೋಕಿಸಿ ಜಿಂಕೆ, ಮಂಗಗಳ ಹಾವಳಿ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು. ಕ್ರಮಕ್ಕೆ ಮುಂದಾಗದೇ ಬೆಳೆ ನಾಶವಾಗಿ ರೈತರಿಗೆ ಹಾನಿಯಾದರೆ ಸರ್ಕಾರದಿಂದ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ಶಿರಸ್ತೇದಾರ ಸಂತೋಷ ಆಸ್ಕಿ ಮನವಿ ಸ್ವೀಕರಿಸಿದದರು. ನಿಂಗಪ್ಪ ಮೋಡಿ, ಲಕ್ಷ್ಮಣ ಸಾವಿರಕುರಿ, ಮಡಿವಾಳಪ್ಪ ಮಡಿವಾಳರ, ಮಂಜಪ್ಪ ಮೋಡಿ, ಬಸಪ್ಪ ದುರಗಣ್ಣವರ, ಇತರರಿದ್ದರು.