

ತರೀಕೆರೆ: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಬೀದಿ ನಾಯಿಗಳ ನಿಯಂತ್ರಣಕ್ಕೆ ಪುರಸಭೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಪುರಸಭೆ ಸದಸ್ಯ ಟಿ.ಜಿ.ಶಶಾಂಕ್ ಹೇಳಿದರು.
ಪುರಸಭೆ ಸಭಾಂಗಣದಲ್ಲಿ ವಸಂತ್‌ಕುಮಾರ್ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಬೀದಿ ನಾಯಿಗಳ ಹಾವಳಿಯಿಂದ ಜನ ಆತಂಕ ಪಡುವಂತಾಗಿದೆ. ಮಕ್ಕಳು, ವಯೋವೃದ್ಧರು ಮನೆಯಿಂದ ಹೊರ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ನಾಯಿಗಳು ದಾಳಿ ನಡೆಸಿದರೆ ಜೀವಕ್ಕೆ ಹಾನಿಯಾಗುವ ಸಂಭವವಿದ್ದು, ಪ್ರಾಣಿ ದಯಾ ಸಂಘದನ್ವಯ ರೂಪಿಸಿರುವ ಕಾನೂನಿನ ಹೊರತಾಗಿಯೂ ನಿಯಂತ್ರಣಕ್ಕೆ ಬೇಕಾದ ಕ್ರಮ ಕೈಗೊಳ್ಳಬೇಕು ಎಂದು ಸಭೆಗೆ ತಿಳಿಸಿದರು.
ಪಟ್ಟಣದಲ್ಲಿ ಹೆಚ್ಚಾಗಿರುವ ಬೀದಿ ನಾಯಿಗಳನ್ನು ಹಿಡಿದು ಪ್ರತ್ಯೇಕ ಕೊಠಡಿಯಲ್ಲಿ ಕೂಡಿ ಹಾಕಿ ಸಾಕುವ ವ್ಯವಸ್ಥೆ ಮಾಡಬೇಕು ಅಥವಾ ಸಂತಾನ ಹರಣ ಶಸಚಿಕಿತ್ಸೆ ಮೂಲಕ ನಿಯಂತ್ರಣ ಕ್ರಮಕೈಗೊಳ್ಳಬೇಕು ಸಹಮತ ವ್ಯಕ್ತಪಡಿಸಿದರು.
ಸದಸ್ಯ ಟಿ.ದಾದಾಪೀರ್ ಮಧ್ಯಪ್ರವೇಶಿಸಿ ಮಾತನಾಡಿ, ಬೀದಿ ನಾಯಿಗಳ ಸಮಸ್ಯೆ ಇಡೀ ದೇಶದಾದ್ಯಂತ ಸದ್ದು ಮಾಡುತ್ತಿದೆ. ಅಲ್ಲದೆ ಈ ಪ್ರಕರಣ ಸುಪ್ರಿಂ ಕೋರ್ಟ್‌ನಲ್ಲಿದ್ದು, ತೀರ್ಪು ಪ್ರಕಟವಾದ ನಂತರ ಯಾವ ರೀತಿಯ ಕ್ರಮಕೈಗೊಳ್ಳಬಹುದು ಎಂದು ನಿರ್ಧರಿಸಿ ಹಾವಳಿ ತಪ್ಪಿಸಲು ಯೋಜನೆ ರೂಪಿಸಬಹುದು ಎಂದು ಸಲಹೆ ನೀಡಿದರು.