

ಗುಂಡ್ಲುಪೇಟೆ : ಬಂಡೀಪುರ ಹುಲಿ ಯೋಜನೆಯ ತಾಲೂಕಿನ ಕುಂದಕೆರೆ ವಲಯದಲ್ಲಿ ಕಾಡಾನೆಗಳ ಹಾವಳಿಯಿಂದ ತಮ್ಮ ಜಮೀನುಗಳಲ್ಲಿ ಯಾವುದೇ ಬೆಳೆಗಳನ್ನು ಬೆಳೆಯಲಾಗುತ್ತಿಲ್ಲ ಎಂದು ಕಾಡಂಚಿನ ಗ್ರಾಮಗಳ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಈ ಭಾಗದ ಜಮೀನುಗಳಲ್ಲಿ ಕಟ್ಟಿರುವ ಮನೆಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದ ಅಕ್ಕಿರಾಜ ಎಂಬ ಆನೆಯನ್ನು ಸೆರೆಹಿಡಿದ ನಂತರ ಕಡಿಮೆಯಾಗಿದ್ದ ದಾಳಿ ಪ್ರಕರಣಗಳು ಈಗ ಮತ್ತಷ್ಟು ಹೆಚ್ಚಾಗಿವೆ. ಈ ಹಿಂದೆ ಅಕ್ಕಿರಾಜನ ಎಡ ಬಲದಲ್ಲಿ ಕಾಣಿಸಿಕೊಳ್ಳುತ್ತಿದ್ದ ಮತ್ತೆರಡು ಆನೆಗಳು ಅದೇ ಮಾದರಿಯಲ್ಲಿ ಪುಂಡಾಟ ಮುಂದುವರಿಸಿವೆ.
ಕಾಡಂಚಿನ ಗ್ರಾಮಗಳಾದ ಉಪಕಾರ, ಉಪಕಾರ ಕಾಲನಿ, ಕುಂದಕೆರೆ, ಕಡಬೂರು, ಬಾಚಹಳ್ಳಿ, ಮಂಗಲ, ಜಕ್ಕಹಳ್ಳಿ, ಚಿಕ್ಕೆಲ್ಚೆಟ್ಟಿ, ಕಣಿಯನಪುರ ಮುಂತಾದ ಗ್ರಾಮಗಳ ಜಮೀನುಗಳಲ್ಲಿ ಬೆಳೆದಿದ್ದ ಬೆಳೆಗಳನ್ನು ನಾಶ ಮಾಡುವ ಜತೆಗೆ ತೆಂಗು ಮುಂತಾದ ಮರಗಳು, ಕೃಷಿ ಉಪಕರಣಗಳನ್ನು ಕಿತ್ತುಹಾಕಿ ಮನೆಗಳನ್ನು ಜಖಂ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಕಾಡಂಚಿನ ಗ್ರಾಮಗಳ ಜನರು ತಮ್ಮ ಜಮೀನುಗಳಲ್ಲಿ ಯಾವುದೇ ಬೆಳೆಗಳನ್ನು ಬೆಳೆಯಲು ಸಾಧ್ಯವಾಗದಂತಾಗಿದ್ದು, ಜೀವನೋಪಾಯಕ್ಕೆ ತೊಂದರೆಯಾಗುತ್ತಿದೆ. ಇದರಿಂದ ಕಾರ್ಮಿಕರಿಗೆ ಯಾವುದೇ ಕೆಲಸವೂ ದಕ್ಕದೆ ಅಕ್ಷರಃ ನಿರುದ್ಯೋಗಿಗಳಾಗಿದ್ದು ಕೆಲಸ ಹುಡುಕಿಕೊಂಡು ನೆರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ಆದ್ದರಿಂದ ಅರಣ್ಯ ಇಲಾಖೆ ಪುಂಡಾನೆಗಳನ್ನು ಕಾಡಿಗಟ್ಟುವ ಮೂಲಕ ಕಾಡಂಚಿನ ರೈತರಿಗೆ ನೆರವಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.