ಮುಸ್ಲಿಂ ಪುಂಡರ ಮೇಲೆ ನಿಯಂತ್ರಣ ಹಾಕಿ: ಮಾಜಿ ಸಂಸದ ಪ್ರತಾಪಸಿಂಹ

prathap simha
Published on

ಮೈಸೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಮುಸ್ಲಿಂ ಪುಂಡರ ಮೇಲೆ ನಿಯಂತ್ರಣ ಹಾಕದಿದ್ದರೆ ನಮ್ಮ ರಕ್ಷಣೆ ಜವಾಬ್ದಾರಿ ನಮಗೆ ಗೊತ್ತಿದೆ ಎಂದು ಮಾಜಿ ಸಂಸದ ಪ್ರತಾಪಸಿಂಹ ರಾಜ್ಯ ಸರ್ಕಾರವನ್ನು ಎಚ್ಚರಿಸಿದರು.
ನಾಗಮಂಗಲ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾಯಕ ಹಿಂದುಗಳ ಬಂಧನ ನಡೆದರೆ ನಾವು ಮತ್ತೆ ನಾಗಮಂಗಲ ಹಾಗೂ ಪೊಲೀಸ್ ಠಾಣೆಗೂ ಬರುತ್ತೇವೆ ಎಂದು ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ ಎಚ್ಚರಿಸಿದರು.
ಗಲಾಟೆ ಶುರು ಮಾಡಿದವರನ್ನು ಬಿಟ್ಟು ಅದಕ್ಕೆ ಪ್ರತಿಕ್ರಿಯೆ ಕೊಟ್ಟವರ ಮೇಲೆ ಕ್ರಮ ಕೈಗೊಂಡರೆ ಅದರ ಅರ್ಥ ಏನು ಎಂದು ಪ್ರಶ್ನಿಸಿದರು.
ಪೊಲೀಸರಿಗೆ ಸರ್ಕಾರ ಸ್ವಾತಂತ್ರೃವನ್ನೇ ನೀಡಿಲ್ಲ. ತಮ್ಮ ತಾಲಿಬಾನ್ ಮನಸ್ಥಿತಿಯಂತೆ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರ ಹೇಗೆ ಇರುತ್ತದೊ ಹಾಗೇ ಇಲಾಖೆಯೂ ಇರುತ್ತದೆ. ಮುಸ್ಲಿಂ ಓಲೈಕೆಗೆ ಸರ್ಕಾರ ಮುಂದಾದರೆ ಇಂತಹ ಸ್ಥಿತಿ ಬರುತ್ತದೆ ಎಂದು ಕಿಡಿಕಾರಿದರು.
ಪೊಲೀಸರು ಮೊದಲು ಮುಸ್ಲಿಮರ ಕೈಯಲ್ಲಿರುವ ಪೆಟ್ರೋಲ್ ಬಾಂಬ್, ತಲ್ವಾರ್‌ಗಳನ್ನ ಕಿತ್ತುಕೊಳ್ಳಬೇಕಿದೆ. ಇಲ್ಲದಿದ್ದರೆ ಮುಂದೆ ನಡೆಯುವ ಗಣೇಶ ಮೆರವಣಿಗೆಳಲ್ಲಿ ನಾವು ಕೂಡ ಕೈಯಲ್ಲಿ ಪೆಟ್ರೋಲ್ ಬಾಂಬ್ ಹಾಗೂ ತಲ್ವಾರ್ ಹಿಡಿದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಆರ್‌ಎಸ್‌ಎಸ್ ಸಮನ್ವಯ ಸಭೆ ವಿಚಾರವಾಗಿ ಮಾತನಾಡಿದ ಅವರು, ನಾನು ಸಭೆಯಲ್ಲಿ ಯಾವ ಅಸಮಾಧಾನ ವ್ಯಕ್ತಪಡಿಸಿಲ್ಲ. ಸಭೆಯ ಕೊನೆಯ ಬೆಂಚ್‌ನಲ್ಲಿ ಕುಳಿತು ಅವರು ಹೇಳಿದ್ದನ್ನೆಲ್ಲ ಕೇಳಿ ಎದ್ದು ಬಂದಿದ್ದೇನೆ. ಆರ್‌ಎಸ್‌ಎಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವಷ್ಟು ನಾನು ದೊಡ್ಡವಲ್ಲ. ನಾನು ಆರ್‌ಎಸ್‌ಎಸ್‌ನಿಂದಲೇ ಬೆಳೆದವನಾಗಿದ್ದು, ನನ್ನ ಜ್ಞಾನಾರ್ಜನೆಯಲ್ಲಿ ಆರ್‌ಎಸ್‌ಎಸ್ ಪಾತ್ರ ದೊಡ್ಡದಿದೆ. ಹೀಗಿರುವಾಗಿ ಅವರ ಮೇಲೆ ನಾನೇಕೆ ಅಸಮಾಧಾನ ವ್ಯಕ್ತಪಡಿಸಲಿ ಎಂದರು.
ಮಹಿಷಾ ದಸರಾಕ್ಕೆ ಬಿಡಲ್ಲ:

ನಾನು ಎಂಪಿಯಾಗಿದ್ದರೂ, ಆಗದಿದ್ದರೂ ತಾಯಿ ಚಾಮುಂಡಿಗೆ ಅವಮಾನವಾಗುವುದಕ್ಕೆ ಅವಕಾಶ ನೀಡಲ್ಲ. ಚಾಮುಂಡಿಬೆಟ್ಟದಲ್ಲಿ ಮಹಿಷಾ ದಸರಾ ನಡೆಸಲು ಬಿಡುವುದಿಲ್ಲ. ಯಾರ ನಿಲುವುಗಳು ಏನೇ ಇರಲಿ. ನನ್ನ ನಿಲುವು ಮಾತ್ರ ಯಾವತ್ತಿಗೂ ಒಂದೇ ಆಗಿದೆ. ಮಹಿಷಾ ದಸರಾ ನಡೆಸುವವರು ಅವರ ಮನೆಗಳಲ್ಲಿ ನಡೆಸಲಿ. ನಮಗೆ ಮಹಿಷನಂಥ ಮಕ್ಕಳೇ ಹುಟ್ಟಲ್ಲಿ ಎಂದು ದಿನವೂ ಪೂಜೆ ಮಾಡಲಿ. ಅದಕ್ಕೆ ನಮ್ಮ ವಿರೋಧವಿಲ್ಲ ಎಂದು ಹೇಳಿದರು.

ಸಿಎಂ ತಲೆದಂಡ ಖಚಿತ
ಮೈಸೂರು: ವಾಲ್ಮೀಕಿ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಲೆದಂಡ ಖಚಿತ ಎಂದು ಪ್ರತಾಪಸಿಂಹ ಹೇಳಿದರು.
ಮುಡಾ ಹಗರಣ ವಿಚಾರ ಕೋರ್ಟ್‌ನಲ್ಲಿದ್ದು, ಆ ಕೇಸ್‌ವಿಚಾರ ಏನೇ ಆಗಲಿ. ಆದರೆ ವಾಲ್ಮೀಕಿ ಹಗರಣದಲ್ಲಿ ಸಿಎಂ ತಲೆದಂಡ ನಿಶ್ಚಿತ. ಅರ್ಥಿಕ ಹಗರಣ ಆದಾಗ ಅದಕ್ಕೆ ಅರ್ಥಿಕ ಸಚಿವರೆ ಹೊಣೆಗಾರರು. 88 ಕೋಟಿ ರೂ. ಅವ್ಯವಹಾರ ಆಗಿದೆ ಎಂದು ಮುಖ್ಯಮಂತ್ರಿಗಳೇ ಸದನದಲ್ಲಿ ಒಪ್ಪಿಕೊಂಡಿದ್ದಾರೆ ಎಂದರು.
ವಾಲ್ಮೀಕಿ ನಿಗಮದ ದುಡ್ಡಲ್ಲಿ ಬಳ್ಳಾರಿ ಲೋಕಸಭಾ ಚುನಾವಣೆ ಮಾಡಲಾಗಿದ್ದು, ಈ ಹಣವನ್ನು ಹೆಂಡ ಖರೀದಿಗೆ ಬಳಸಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ರಾಜೀನಾಮೆ ನಿಶ್ಚಿತ ಎಂದು ಹೇಳಿದರು.
ಮುಡಾ ವಿಚಾರದಲ್ಲಿ ನಾನು ಮೊದಲೇ ಸೈಟ್ ವಾಪಸ್ ಕೊಡಿ ಅಂತ ಹೇಳಿದ್ದೆ, ನನ್ನ ಮಾತು ಸಿಎಂ ಕೇಳಲಿಲ್ಲ. ಈಗ ಮುಂಚಿತವಾಗಿಯೆ ರಾಜೀನಾಮೆ ಕೊಡಿ ಅಂದರೆ ನನ್ನಂಥ ಸಣ್ಣವನ ಮಾತು ಅವರು ಕೇಳುತ್ತಾರಾ ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net