

ಗಂಗಾವತಿ: ತಾಲೂಕಿನ ಅಕ್ರಮ ಮರಳು ಸಾಗಣೆ, ಇಸ್ಪೀಟ್ ಮತ್ತು ಮಟ್ಕಾ ಹಾವಳಿ ನಿಯಂತ್ರಿಸುವಂತೆ ಒತ್ತಾಯಿಸಿ ದಲಿತ ಸಂಘಟನಾ ಸಮಿತಿ ಭೀಮ ಘರ್ಜನೆ ಜಿಲ್ಲಾ ಘಟಕ ನಗರದ ತಹಸಿಲ್ ಕಚೇರಿಯ ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ ಗೌಡರ್‌ಗೆ ಗುರುವಾರ ಮನವಿ ಸಲ್ಲಿಸಿತು.
ಇದನ್ನೂ ಓದಿ:ಅಕ್ರಮ ಮರಳು ಸಾಗಣೆ ಮೂರು ದೋಣಿ ವಶಕ್ಕೆ
ಸಮಿತಿ ಜಿಲ್ಲಾಧ್ಯಕ್ಷ ಅಜಯ್ ಕುಮಾರ ಛಲವಾದಿ ಮಾತನಾಡಿ, ಅಂದರ್-ಬಾಹರ್ ಇಸ್ಪೀಟ್ ಮತ್ತು ಮಟ್ಕಾ ಮಿತಿ ಮೀರಿದ್ದು, ಮರಳು ಅಕ್ರಮ ಸಾಗಣೆಯಾಗುತ್ತಿದೆ. ತಾಲೂಕಿನ ವಿಠಲಾಪುರ, ಆಗೋಲಿ, ಗಡ್ಡಿ, ಉಡಮಕಲ್ ಹಾಗೂ ಸಿದ್ದಿಕೇರಿ ಭಾಗದಲ್ಲಿ ಮರಳು ಮತ್ತು ಮರಮ್ ಅಕ್ರಮವಾಗಿ ಸಾಗಿಸಿ ತೆರಿಗೆ ವಂಚಿಸುತ್ತಿದ್ದಾರೆ. ರಾತ್ರಿ ವೇಳೆ ನಡೆಯುವ ಮರಳು ಸಾಗಣೆ ದಂಧೆಯಲ್ಲಿ ಯರ‌್ರಾಬಿರ‌್ರಿ ಸಂಚರಿಸುವ ಟಿಪ್ಪರ್‌ಗಳು ಅಪಘಾತಕ್ಕೆ ಕಾರಣವಾಗುತ್ತಿವೆ. ಎಲ್ಲೆಂದರಲ್ಲಿ ನಡೆಯುವ ಇಸ್ಪೀಟ್, ಮಟ್ಕಾ ಆಟಗಳಿಗೆ ಯುವಕರು ಬಲಿಯಾಗುತ್ತಿದ್ದಾರೆ. ಸಾಲ ನೀಡಿ ಜೂಜಾಟಕ್ಕೆ ಪ್ರೇರೇಪಿಸುವ ತಂಡಗಳಿದ್ದು, ಪೊಲೀಸರ ಗಮನಕ್ಕೆ ತಂದರೂ ನಿಯಂತ್ರಣವಾಗಿಲ್ಲ. ಕನಕಗಿರಿ, ಕಾರಟಗಿ, ಗಂಗಾವತಿ ತಾಲೂಕಿನ ಕೆಲ ವಸತಿ ಗೃಹದಲ್ಲಿ ಇಸ್ಪೀಟ್ ಆಟ, ಮಟ್ಕಾ ಬುಕ್ಕಿಂಗ್ ಹಾವಳಿ ಹೆಚ್ಚಾಗಿದೆ. ಅಕ್ರಮ ದಂಧೆಗಳಿಗೆ ಕಡಿವಾಣ ಹಾಕದಿದ್ದರೆ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕಿಷ್ಕಿಂದಾ ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ದೇವಣ್ಣ ಐಹೊಳೆ, ಪದಾಧಿಕಾರಿಗಳಾದ ನಬೀ, ರಸೂಲ್, ಪರಶುರಾಂ ನಾಯಕ್ ಇತರರಿದ್ದರು.