ಪುರಸಭೆಯಲ್ಲಿ ದಲ್ಲಾಳಿಗಳನ್ನು ನಿಯಂತ್ರಿಸಿ

bir 1 (5)
Published on

ಬೀರೂರು: ಪುರಸಭೆಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದ್ದು, ಮುಖ್ಯಾಧಿಕಾರಿಗಳು ಇದಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಕಚೇರಿಯಲ್ಲಿ ಸದಸ್ಯರ ಮಾತಿಗಿಂತ ದಲ್ಲಾಳಿಗಳ ಮಾತಿಗೆ ಬೆಲೆ ಹೆಚ್ಚು ಎಂದು ಸಾರ್ವಜನಿಕರು ಆಡಿಕೊಳ್ಳುತ್ತಿದ್ದಾರೆ ಎಂದು ಪುರಸಭೆ ಸದಸ್ಯರು ಮುಖ್ಯಾಧಿಕಾರಿ ವಿರುದ್ಧ ಕಿಡಿಕಾರಿದರು.

ಪುರಸಭೆ ಸಭಾಂಗಣದಲ್ಲಿ ಪುರಸಭೆ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಮೋಹನ್ ಅಧ್ಯಕ್ಷತೆಯಲ್ಲಿ ನಡೆದ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮುಖ್ಯಾಧಿಕಾರಿ ನಡೆಗೆ ಆಕ್ಷೇಪಿಸಿದ ಸದಸ್ಯರು, ಪುರಸಭೆ ದಾಖಲೆಗಳ ಕೊಠಡಿಯಲ್ಲಿ ದಲ್ಲಾಳಿಗಳು ನೇರವಾಗಿ ಪ್ರವೇಶಿಸಿ ದಾಖಲೆಗಳನ್ನು ತಿದ್ದುತ್ತಿದ್ದರೂ ಕಚೇರಿಯಲ್ಲಿ ಅಧಿಕಾರಿಗಳು ಮೂಕ ಪ್ರೇಕ್ಷಕರಂತೆ ಇರುತ್ತಾರೆ. 10, 20 ಸಾವಿರಗಳಿಗೆ ಇ-ಸ್ವತ್ತು ಮಾಡಿಸಿಕೊಡುವುದಾಗಿ ದಲ್ಲಾಳಿಗಳು ಜನರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಈ ವಿಚಾರವಾಗಿ ಮುಖ್ಯಾಧಿಕಾರಿ ಸ್ಪಷ್ಟಿಕರಣ ನೀಡಬೇಕು ಎಂದು ಸದಸ್ಯರಾದ ರೋಹಿಣಿ, ಎಸ್.ಎನ್.ರಾಜು ಆರೋಪಿಸಿದರು.

ಪುರಸಭೆಯಿಂದ ನಿರ್ಮಿಸಿರುವ ಖಾಸಗಿ ಬಸ್‌ನಿಲ್ದಾಣದ ವಾಣಿಜ್ಯ ಮಳಿಗೆಗಳ ಬಾಡಿಗೆ ಬಾಬ್ತು 50 ರಿಂದ 60 ಲಕ್ಷ ಬಾಕಿ ಇದ್ದರೂ ಇದರ ವಸೂಲಿಗೆ ಪುರಸಭೆ ಕ್ರಮವಹಿಸಿಲ್ಲ. ಒಂದೆಡೆ ವಸೂಲಿಗಾಗಿ ತೆರಳಿ ಬೀಗ ಜಡಿದು ನಂತರ ಇಂತಹ ಸದಸ್ಯರ ಬಳಿಗೆ ಹೋಗಿ ನಿಮ್ಮ ಸಮಸ್ಯೆಗಳಿಂದ ಪಾರಾಗಿ ಎಂದು ಅಧಿಕಾರಿಗಳೇ ಬಾಡಿಗೆದಾರರಿಗೆ ಹಚ್ಚಿಕೊಡುವ ಕೆಲಸ ಮಾಡುತ್ತಿದ್ದಾರೆ. ಹೀಗಾದರೆ ಪುರಸಭೆ ಪಟ್ಟಣದ ಅಭಿವೃದ್ಧಿಗಾಗಿ ಕೆಲಸ ಮಾಡಲು ಹೇಗೆ ಸಾಧ್ಯ ಎಂದು ಸದಸ್ಯ ಬಿ.ಕೆ.ಶಶಿಧರ್ ದೂರಿದರು.

ಪುರಸಭೆ ಉಪಾಧ್ಯಕ್ಷ ಎನ್.ಎಂ.ನಾಗರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಣ್, ಸದಸ್ಯರಾದ ಎಂ.ಪಿ.ಸುದರ್ಶನ್, ಲೋಕೇಶಪ್ಪ, ಸುಮಿತ್ರ, ಜ್ಯೋತಿ, ನಂದಿನಿ, ಗಂಗಾಧರ್, ರವಿ, ಜ್ಯೋತಿ ಮತ್ತು ನಾಮಿನಿ ಸದಸ್ಯರಾದ ಮೋಹನ್ ಕುಮಾರ್, ಕಾಂತರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net