ಸರಳ ವಿಧಾನಗಳಿಂದ ಕಪ್ಪು ತಲೆಹುಳು ನಿಯಂತ್ರಣ

18KDR4
ಪಂಚನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಕಪ್ಪು ತಲೆ ಹುಳುವಿನ ನಿಯಂತ್ರಣ ಕುರಿತ ಕಾರ್ಯಾಗಾರದಲ್ಲಿ ಎಚ್.ಕೆ.ಜಯದೇವ್ ಮಾತನಾಡಿದರು. ಸಾವೆ ಮರುಳಪ್ಪ, ರಂಗನಾಥ್, ಪಾಪಣ್ಣ ಮತ್ತಿತರಿದ್ದರು.
Published on

ಕಡೂರು: ತೆಂಗಿನ ಮರಗಳಲ್ಲಿ ಕಾಣಿಸಿಕೊಳ್ಳುವ ರೋಗಗಳನ್ನು ತಡೆಯುವ ಸರಳ ವಿಧಾನಗಳನ್ನು ಅಳವಡಿಸಿಕೊಂಡರೆೆ ರೋಗಗಳನ್ನು ಹತೋಟಿಯಲ್ಲಿಡಲು ಸಾಧ್ಯ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಎಚ್.ಕೆ.ಜಯದೇವಪ್ಪ ತಿಳಿಸಿದರು.
ಪಂಚನಹಳ್ಳಿ ಗ್ರಾಮದಲ್ಲಿ ಬುಧವಾರ ತೋಟಗಾರಿಕೆ ಇಲಾಖೆಯಿಂದ ತೆಂಗು ಅಭಿವೃದ್ಧಿ ಯೋಜನೆಯಡಿ ತೆಂಗು ಬೆಳೆಗೆ ತಗುಲಿರುವ ಕಪ್ಪುತಲೆ ಹುಳು ನಿಯಂತ್ರಣದ ಕುರಿತು ನಡೆದ ಕಾರ್ಯಗಾರದಲ್ಲಿ ಇಲಾಖೆ ಕೈಗೊಂಡಿರುವ ಕ್ರಮದ ಬಗ್ಗೆ ಮಾಹಿತಿ ನೀಡಿ, ತೆಂಗಿನ ಮರಗಳಲ್ಲಿ ಅನೇಕ ರೀತಿಯ ರೋಗಗಳು ಕಾಣಿಸಿಕೊಳ್ಳುತ್ತಿವೆ. ಆದರೆ ಎಲ್ಲ ರೋಗಗಳಿಗೂ ಸೂಕ್ತ ಚಿಕಿತ್ಸೆಯಿದೆ. ತೆಂಗು ಬೆಳೆಗಾರರು ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದರೆ ಸೂಕ್ತ ಮಾಹಿತಿ ದೊರೆಯುತ್ತದೆ. ರೋಗಗಳು ಕಾಣಿಸಿಕೊಂಡ ಮಾತ್ರಕ್ಕೆ ಬೆಳೆಗಾರರು ಹತಾಶರಾಗಬೇಕಿಲ್ಲ ಎಂದು ಹೇಳಿದರು.
ಸಂಪನ್ಮೂಲ ವಿಜ್ಞಾನಿ ಡಾ.ಎಸ್.ಕೆ.ಜಗದೀಶ್ ಮಾತನಾಡಿ, ತೆಂಗಿನ ಮರಗಳಲ್ಲಿ ಅಣಬೆ ರೋಗ, ಕಾಂಡ ಸೋರುವ ರೋಗ, ಸುಳಿಕೊಳೆ ರೋಗ, ಎಲೆ ಚುಕ್ಕೆ ರೋಗ ಹೀಗೆ ಅನೇಕ ರೋಗಗಳು ಕಾಣಿಸಿಕೊಳ್ಳುತ್ತವೆ. ಇವುಗಳ ಜತೆಗೆ ಕೀಟಗಳಿಂದ ಕೂಡ ತೆಂಗಿನ ಮರಗಳು ಹಾನಿಗೆ ಒಳಗಾಗುತ್ತಿವೆ. ಇವುಗಳಲ್ಲಿ ಕಪ್ಪು ತಲೆ ಹುಳುವಿನ ರೋಗ ಪ್ರಮುಖವಾಗಿದೆ. ಈ ಕೀಟವು ಎಲೆಯ ಕೆಳ ಭಾಗದಲ್ಲಿ ನೂಲಿನ ಗೂಡನ್ನು ನೇಯ್ದು ಎಲೆಗಳ ಪತ್ರವನ್ನು ಹರಿದು ತಿನ್ನುವುದರಿಂದ ಗರಿಗಳ ಮೇಲೆ ಒಣಹುಲ್ಲಿನ ಬಣ್ಣದ ಮಚ್ಚೆಗಳು ಕಾಣುತ್ತವೆ. ಇದರಿಂದಾಗಿ ಹಾನಿಗೊಳಗಾದ ಗರಿ ಜಾಗವು ಸುಟ್ಟಂತೆ ಕಾಣಿಸುತ್ತದೆ.ಇಂತಹ ಎಲೆಗಳನ್ನು ಕಡಿದು ಸುಟ್ಟು ಹಾಕುವುದು ಹಾಗೂ ಕಪ್ಪುತಲೆ ಹುಳುಗಳನ್ನು ತಿನ್ನುವ ಪರತಂತ್ರ ಜೀವಿಗಳನ್ನು ತಂದು ಮರಗಳಿಗೆ ಬಿಡುವುದರಿಂದ ರೋಗವನ್ನು ನಿಯಂತ್ರಿಸಬಹುದು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸಾವೆ ಮರುಳಪ್ಪ , ಸ್ಥಳೀಯ ಸಂಪನ್ಮೂಲ ವ್ಯಕ್ತಿ ಪಿ.ಎನ್.ಓಂಕಾರಮೂರ್ತಿ, ಗ್ರಾಪಂ ಸದಸ್ಯರಾದ ಪಿ.ಎಂ.ಪಾಪಣ್ಣ, ಪಿ.ಆರ್.ರಂಗನಾಥ್, ಪಿ.ಎಸ್.ಸಂತೋಷ್, ರೂಪ ಶ್ರೀನಿವಾಸ್, ಸಹಾಯಕ ತೋಟಗಾರಿಕೆ ಇಲಾಖೆಯ ಅಧಿಕಾರಿ ರಶೀದ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net