

ಅರಕಲಗೂಡು: ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಭಾನುವಾರ ವಿಶ್ವಕರ್ಮ ಜಯಂತಿ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಎ.ಮಂಜು ಮಾತನಾಡಿ, ಶಿಲ್ಪಕಲಾ ಕ್ಷೇತ್ರಕ್ಕೆ ವಿಶ್ವಕರ್ಮ ಸಮುದಾಯದ ಕೊಡುಗೆ ಮಹತ್ತರವಾದುದು. ನಮ್ಮ ಪ್ರಾಚೀನ ದೇವಾಲಯಗಳ ವೈಭವವನ್ನು ವಿಶ್ವಕರ್ಮರ ಕಲೆ ಹೆಚ್ಚಿಸಿದೆ. ಕಲ್ಪನೆಯ ದೇವರುಗಳಿಗೆ ಮೂರ್ತ ರೂಪ ನೀಡಿ ಜನರಲ್ಲಿ ನಂಬಿಕೆ ಮೂಡಿಸಿರುವ ವಿಶ್ಚಕರ್ಮರ ಕಲಾಪ್ರತಿಭೆ ಅನನ್ಯ ಎಂದು ಬಣ್ಣಿಸಿದರು.
ಶಿಕ್ಷಕ ಫಾಲಾಕ್ಷ ವಿಶ್ವಕರ್ಮರ ಕೊಡುಗೆ ಮತ್ತು ಮಹತ್ವ ಕುರಿತು ತಿಳಿಸಿದರು. ತಹಸೀಲ್ದಾರ್ ಬಸವ ರೆಡ್ಡಪ್ಪ ರೋಣದ, ತಾಲೂಕು ಕಚೇರಿ ಶಿರಸ್ತೇದಾರ್ ಸಿ.ಸ್ವಾಮಿ, ತಾಲೂಕು ವಿಶ್ವ ಕರ್ಮ ಸಮಾಜದ ಅಧ್ಯಕ್ಷ ಎಚ್.ಬಿ.ಕೃಷ್ಣ, ಗೌರವ ಅಧ್ಯಕ್ಷ ಶಂಕರಾಚಾರ್, ಕಾರ್ಯದರ್ಶಿ ಯೋಗಾಚಾರ್, ಮಂಜಾಚಾರ್ ಇದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ವಿಶ್ವಕರ್ಮರ ಭಾವ ಚಿತ್ರದ ಮೆರವಣಿಗೆ ಮಾಡಲಾಯಿತು.