

ಮಂಗಳೂರು: ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ವತಿಯಿಂದ ಮಂಗಳಾದೇವಿ ದೇವಸ್ಥಾನಕ್ಕೆ ನವರಾತ್ರಿಯ ಸಂದರ್ಭದಲ್ಲಿ ಬೇಕಾಗುವಂತ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ 5000 ಪ್ರಸಾದ ನೀಡುವ ಕೈಚೀಲಗಳು ಮತ್ತು ಭಕ್ತರಿಗೆ ದೇವಸ್ಥಾನದಲ್ಲಿ ಊಟಕ್ಕೆಂದು 500 ಸ್ಟೀಲ್ ತಟ್ಟೆಗಳನ್ನು ದೇವಸ್ಥಾನದ ಆಡಳಿತ ಮುಕ್ತೇಸರ ಅರುಣ ಐತಾಳ್ ಅವರಿಗೆ ದೇವಸ್ಥಾನದಲ್ಲಿ ಹಸ್ತಾಂತರಿಸಿದರು.
ಶ್ರೀಶಾ ಸೊಸೈಟಿಯ ಅಧ್ಯಕ್ಷ ಎಂ.ಎಸ್.ಗುರುರಾಜ್ ಈ ಸಂದರ್ಭ ಮಾತನಾಡಿ, ಶ್ರೀಶಾ ಸೊಸೈಟಿಯು ಆರಂಭವಾಗಿ ಆರು ವರ್ಷಗಳಾದ ಶುಭಾವಸರದಲ್ಲಿ ಮಂಗಳೂರಿನ ಗ್ರಾಮದೇವತೆ ಮಂಗಳಾದೇವಿಯ ಭಕ್ತರಿಗೆ ಅನುಕೂಲವಾಗುವಂತ ಊಟದ ತಟ್ಟೆಗಳನ್ನು ಹಾಗೂ ದೇವರ ಪ್ರಸಾದವನ್ನು ನೀಡಲು ಚೀಲಗಳನ್ನು ದೇವಸ್ಥಾನಕ್ಕೆ ನೀಡಲು ಅವಕಾಶ ದೊರಕಿದ್ದು ನಮ್ಮ ಸೌಭಾಗ್ಯ. ಮಂಗಳಾದೇವಿ ನಮ್ಮ ನಿಮ್ಮನ್ನೆಲ್ಲಾ ಸಕಲ ಸೌಭಾಗ್ಯಗಳನ್ನಿತ್ತು ಅನುಗ್ರಹಿಸಲಿ ಎಂದು ಮಾತೆಯಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಮಂಗಳಾದೇವಿ ದೇವಸ್ಥಾನದ ಆಡಳಿತ ಮುಕ್ತೇಸರ ಅರುಣ ಐತಾಳ್ ಮಾತನಾಡಿ, ಶ್ರೀಶಾ ಸೌಹಾರ್ದ ಸೊಸೈಟಿಯ ಈ ದೊಡ್ಡ ಕೊಡುಗೆ ದೇವಸ್ಥಾನಕ್ಕೆ ತುಂಬಾ ಉಪಯೋಗವಾಗಲಿದೆ. ಶ್ರೀಶಾ ಸೊಸೈಟಿಯು ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದರು.
ಶ್ರೀಶಾ ಸೊಸೈಟಿಯ ಉಪಾಧ್ಯಕ್ಷ ಉದಯ ವಿ ಶಾಸ್ತ್ರಿ, ನಿರ್ದೇಶಕರುಗಳಾದ ಸುರೇಶ್ ಬೈಂದೂರು, ವತ್ಸಲ ಬಾಬು,ಎಂ.ಎಸ್.ಮಾಧವ, ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಚಿತ್ರಾ ಡಿ ಸೋಜ, ಸೊಸೈಟಿಯ ವ್ಯವಸ್ಥಾಪಕರುಗಳಾದ ಕುಸುಮಾ ಐತಾಳ್, ದೀಪ್ತಿ, ಗಾಯತ್ರಿ, ಪಂಚಮಿ, ಹಿರಿಯರಾದ ರಘುರಾಮ ರಾವ್ ಮುಂತಾದವರಿದ್ದರು.