

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಶೈಕ್ಷಣಿಕ ಜೀವನದಲ್ಲಿ ಒಂದು ಹಂತದ ಶಿಕ್ಷಣ ಪೂರೈಸಿದ ಕೂಡಲೇ ಎಲ್ಲವೂ ಮುಗಿಯಿತೆಂದು ಭಾವಿಸದೆ ಇನ್ನಷ್ಟು ಶಿಕ್ಷಣ ಪಡೆಯುವ ಜತೆಗೆ ಜ್ಞಾನ ವೃದ್ಧಿಸಿಕೊಂಡಾಗ ಉನ್ನತ ಹುದ್ದೆಯ ಅವಕಾಶ ತಾನಾಗಿಯೇ ಬರುತ್ತದೆ ಎಂದು ಕರ್ನಾಟಕದ ಮುಖ್ಯಮಂತ್ರಿಗಳ ಹಾಗೂ ವಿತ್ತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಬಿಜಿನೆಸ್ ಕಾರಿಡಾರ್ ಲಿಮಿಟೆಡ್ನ ಮುಖ್ಯಸ್ಥ ಹಿರಿಯ ಐಎಎಸ್ ಅಧಿಕಾರಿ ಎಲ್.ಕೆ.ಅತೀಕ್ ಹೇಳಿದರು.
ಇನೋಳಿಯಲ್ಲಿರುವ ಬ್ಯಾರೀಸ್ ನಾಲೆಜ್ ಕ್ಯಾಂಪಸ್ನಲ್ಲಿರುವ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಬಿಐಟಿ), ಬ್ಯಾರೀಸ್ ಎನ್ವಿರೋ-ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್(ಬೀಡ್ಸ್) ಮತ್ತು ಬಿಐಟಿ ಪಾಲಿಟೆಕ್ನಿಕ್ ವತಿಯಿಂದ ಬಿಐಟಿ 12ನೇ ಬ್ಯಾಚ್ ವಿದ್ಯಾರ್ಥಿಗಳಿಗೆ ಮತ್ತು ಬೀಡ್ಸ್ 5ನೇ ಬ್ಯಾಚ್ನ ವಿದ್ಯಾರ್ಥಿಗಳಿಗೆ ಶನಿವಾರ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಉದ್ದೇಶಿತ ಗುರಿ ಇಲ್ಲದ ವಿದ್ಯೆಯಿಂದ ಸಾರ್ಥಕ್ಯ ಕಾಣಲು ಸಾಧ್ಯವಿಲ್ಲ. ಉದ್ಯೋಗ ಸೃಷ್ಟಿಸುವ ಜವಾಬ್ದಾರಿ ಪದವೀಧರರ ಮೇಲಿದೆ. ತಮ್ಮ ಶಿಕ್ಷಣಕ್ಕಾಗಿ ಶ್ರಮಿಸಿದ ಹೆತ್ತವರು ಮತ್ತು ಸಮಾಜಕ್ಕೆ ತನ್ನಿಂದಾಗುವ ಕೊಡುಗೆ ನೀಡಲು ಪದವೀಧರರು ಮುಂದಾಗಬೇಕು ಎಂದರು.
ಬ್ಯಾರೀಸ್ ಅಕಾಡೆಮಿ ಆಫ್ ಲರ್ನಿಂಗ್ ಅಧ್ಯಕ್ಷ ಸೈಯ್ಯದ್ ಮೊಹಮ್ಮದ್ ಬ್ಯಾರಿ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಷ್ನೇಡರ್ ಇಲೆಕ್ಟ್ರಿಕ್ನ ಉಪಾಧ್ಯಕ್ಷೆ ಚಿತ್ರಾ ಸುಕುಮಾರ್ ಹಾಗೂ ಐಜಿಬಿಸಿ ಮಂಗಳೂರು ವಲಯ ಅಧ್ಯಕ್ಷ ವೆಂಕಟೇಶ್ ಪೈ, ಬೀಡ್ಸ್ ಪ್ರಾಂಶುಪಾಲ ಆರ್.ಖಲೀಲ್ ರಝಾಕ್, ಬಿಐಟಿ ಪಾಲಿಟೆಕ್ನಿಕ್ ನಿರ್ದೇಶಕ ಪ್ರೊ.ಪೃಥ್ವಿರಾಜ್, ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ.ಅಬ್ದುಲ್ಲಾ ಗುಬ್ಬಿ ಉಪಸ್ಥಿತರಿದ್ದರು.
ಬಿಐಟಿಯ ಪ್ರಾಂಶುಪಾಲ ಡಾ.ಮಂಝೂರ್ ಬಾಷಾ ಸ್ವಾಗತಿಸಿದರು. ಡಾ.ಅಝೀಝ್ ಮುಸ್ತಫಾ ವಂದಿಸಿದರು. ಪ್ರೊ.ಜಾಯ್ಸನ್ ಮಿರಿಂಡಾ ಮತ್ತು ಹನೀನಾ ನಿರೂಪಿಸಿದರು.
ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಸಿವಿಲ್, ಮೆಕ್ಯಾನಿಕಲ್, ಕಂಪ್ಯೂಟರ್ ಸೈನ್ಸ್, ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ನ ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮತ್ತು ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರತಿ ವಿಭಾಗದಿಂದ ಹೊರಹೋಗುವ ಉತ್ತಮ ವಿದ್ಯಾರ್ಥಿ ಹಾಗೂ ಶೈಕ್ಷಣಿಕ ಸಾಧನಾ ಪ್ರಶಸ್ತಿ ನೀಡಲಾಯಿತು.
ನಮ್ಮ ಗುರಿ ಉದ್ಯೋಗ ಮಾತ್ರವಾಗಿರದೆ, ಜ್ಞಾನ ಸಂಪಾದನೆಯೂ ಆಗಬೇಕು. ಜೀವನದಲ್ಲಿ ಸರಿಯಾದ ಧ್ಯೇಯ, ಅಚಲ ವಿಶ್ವಾಸ, ನಂಬಿಕೆ, ನಿಷ್ಠೆ, ಮಾನವೀಯ ಮೌಲ್ಯಗಳು ನಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಶಿಕ್ಷಣ, ಜ್ಞಾನ, ತಿಳಿವಳಿಕೆ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಸಮಾಜ, ನಾಡು, ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು.
- ಸೈಯ್ಯದ್ ಮೊಹಮ್ಮದ್ ಬ್ಯಾರಿ, ಅಧ್ಯಕ್ಷರು, ಬ್ಯಾರೀಸ್ ಅಕಾಡೆಮಿ ಆಫ್ ಲರ್ನಿಂಗ್
ತಮ್ಮ ಮಕ್ಕಳನ್ನು ಸುಶಿಕ್ಷಿತರನ್ನಾಗಿಸಲು ಸಾಕಷ್ಟು ಕಷ್ಟಪಡುವ ಹೆತ್ತವರು ಶಿಕ್ಷಣ ಪಡೆದ ಬಳಿಕ ನಿರೀಕ್ಷೆಗಳನಿಟ್ಟುಕೊಂಡಿರುತ್ತಾರೆ. ಈ ಹಿನ್ನೆಲೆಯಲ್ಲಿ ಪದವೀಧರರು ಪಾಲಕರ ನಿರೀಕ್ಷೆ ಹುಸಿಗೊಳಿಸದೆ ಶಿಸ್ತಿನಿಂದ ವೃತ್ತಿ ಜೀವನ ಅನುಭವಿಸಬೇಕು.
- ಪ್ರೊ.ಪಿ.ಎಲ್.ಧರ್ಮ, ಮಂಗಳೂರು ವಿವಿ ಕುಲಪತಿ