

ಗದಗ: ಕೀರ್ತನ ಮತ್ತು ಕಾವ್ಯದ ಮೂಲಕ ಜನಮಾನಸವನ್ನು ತಿದ್ದಿ ತೀಡುವ ಕಾರ್ಯವನ್ನು ಮಾಡಿದವರು ಕನಕದಾಸರು. ದಾಸ ಪರಂಪರೆಯಲ್ಲಿ ವಿಶೇಷ ಸ್ಥಾನ ಪಡೆದಿರುವ ಅವರು ಕರ್ನಾಟಕ ಸಂಗೀತಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಭಕ್ತಿಯ ಪಾರಮ್ಯದ ಜತೆಗೆ ಸಮಾಜದಲ್ಲಿ ನೆಲೆಯೂರಿದ್ದ ಭೇದಭಾವ ತೊಡೆದು ಹಾಕಲು ಪ್ರಯತ್ನಿಸಿದ್ದಾರೆ ಎಂದು ಭೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಹೇಳಿದರು.
ನಗರದ ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ 2514ನೇ ಶಿವಾನುಭವದಲ್ಲಿ ಮಾತನಾಡಿದರು. 12ನೇ ಶತಮಾನದಲ್ಲಿ ಬಸವಾದಿಶರಣರು ತಾರತಮ್ಯ ನಿವಾರಿಸಲು ಮಾಡಿದ ಪ್ರಯತ್ನವನ್ನು ಕನಕದಾಸರು ಮುಂದುವರಿಸಿದರು ಎಂದು ತಿಳಿಸಿದರು.
‘ದಾಸಶ್ರೇಷ್ಠ ಕನಕದಾಸರು’ ಎಂಬ ವಿಷಯವಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಎಫ್.ಟಿ. ಹಳ್ಳಿಕೇರಿ ಉಪನ್ಯಾಸ ನೀಡಿ, ಬಸವಣ್ಣನ ಬಂಡಾಯದ ಮನೋಧರ್ಮವನ್ನು ಕನಕದಾಸರ ಕೀರ್ತನೆಗಳಲ್ಲಿ ಕಾಣಬಹುದು. ಜನಸಾಮಾನ್ಯರನ್ನು ಸರಿದಾರಿಗೆ ತರುವ ಪ್ರಯತ್ನವಾಗಿ ಕೀರ್ತನೆ, ಕಾವ್ಯಗಳನ್ನು ರಚಿಸಿದ್ದಾರೆ. ಶರಣರ ನಂತರ ದಾಸರು ಕನ್ನಡವನ್ನು ಗಟ್ಟಿಗೊಳಿಸಿದರು. ದೈವ ಪ್ರಾರ್ಥನೆ, ಗುರುಸ್ತುತಿ, ಜ್ಞಾನ, ಭಕ್ತಿ, ವೈರಾಗ್ಯ, ಸಾಮಾಜಿಕ ಚಿಂತನೆಗಳು ಕನಕದಾಸರ ಕಾವ್ಯದ ವಸ್ತುಗಳಾಗಿವೆ ಎಂದರು.
ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಫಕೀರಪ್ಪ ಹೆಬಸೂರ ಮಾತನಾಡಿ, ತೋಂಟದಾರ್ಯ ಮಠ ಸೌಹಾರ್ದತೆಗೆ ಹೆಸರಾಗಿದೆ. ಹಾಲುಮತ ಸಂಸ್ಕೃತಿಯ ಅಭಿವೃದ್ಧಿಗೆ ಶ್ರೀಮಠದ ಕೊಡುಗೆ ಅಪಾರವಾದುದು. ಕನಕದಾಸರ ಜೀವನ ಮತ್ತು ಕಾವ್ಯ ಸ್ವಸ್ಥ ಸಮಾಜದ ಅಭಿವೃದ್ಧಿಗೆ ಕಾರಣವಾಗಿದೆ ಎಂದರು.
ಡಾ. ಜಿ.ಬಿ. ಬಿಡಿನಹಾಳ ಮಾತನಾಡಿ, ಕನಕದಾಸರ ವಿಚಾರಗಳು ಸಾರ್ವಕಾಲಿಕವಾಗಿವೆ. ಅವರ ಕಾವ್ಯದ ಸಾರವನ್ನು ಅರ್ಥೈಸಿಕೊಂಡು ಜೀವನ ದರ್ಶನ ಕಂಡುಕೊಳ್ಳಬೇಕಾಗಿದೆ ಎಂದರು.
ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ಅವರಿಂದ ಕನಕದಾಸರ ಕಾವ್ಯಗಾಯನ ಜರುಗಿತು. ಧರ್ಮಗ್ರಂಥ ಪಠಣವನ್ನು ಶ್ರೇಯಾ ಬಸವರಾಜ ಅಂಗಡಿ ಹಾಗೂ ವಚನ ಚಿಂತನವನ್ನು ನೇತ್ರಾವತಿ ವೀರಣ್ಣ ನರಗುಂದ ನೆರವೇರಿಸಿದರು.
ಬಸವರಾಜ ಗಾಳಪ್ಪನವರ ಮತ್ತು ಹುಚ್ಚಣ್ಣ ಶಹಪೂರ ಹಾಗೂ ವೀರಣ್ಣ ಬೇವಿನಮರದ, ಶಿವಾನುಭವ ಸಮಿತಿ ಚೇರ್ಮನ್ ವಿವೇಕಾನಂದಗೌಡ ಪಾಟೀಲ, ಗೌರಕ್ಕ ಬಡಿಗಣ್ಣವರ, ವೀರಣ್ಣ ಗೊಡಚಿ, ವಿಜಯಕುಮಾರ ಹಿರೇಮಠ, ಶಶಿಧರ ಬೀರನೂರ, ಪ್ರಕಾಶ ಅಸುಂಡಿ, ಪ್ರಭು ಗಂಜಿಹಾಳ ಉಪಸ್ಥಿತರಿದ್ದರು.
ರತ್ನಕ್ಕ ಪಾಟೀಲ ನಿರೂಪಿಸಿದರು. ಸಂಘದ ಅಧ್ಯಕ್ಷ ಎಂ.ಸಿ. ಐಲಿ ಸ್ವಾಗತಿಸಿದರು.