

ಗಂಗಾವತಿ: ಬಡತನ ನಿರ್ಮೂಲನೆಗೆ ಪೂರಕವಾದ ಯೋಜನೆ ಜಾರಿಗೆ ತರುವುದರ ಜತೆಗೆ ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ವಿಭಾಗದ ನಿರ್ದೇಶಕ ಜೆ.ಚಂದ್ರಶೇಖರ್ ಹೇಳಿದರು.
ನಗರದ ಲಕ್ಷ್ಮಿಕ್ಯಾಂಪ್ ಶ್ರೀಮಹಾಲಕ್ಷ್ಮಿ ದೇವಾಲಯದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ನ ಜ್ಞಾನವಿಕಾಸ ಯೋಜನೆಯಡಿ ಭಾನುವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಗಾಂಧಿ ಕಂಡ ಗ್ರಾಮಾಭಿವೃದ್ಧಿ ಕನಸನ್ನು ಟ್ರಸ್ಟ್ ಸಾಕಾರಗೊಳಿಸುತ್ತಿದೆ. ಆರ್ಥಿಕಾಭಿವೃದ್ಧಿ ಯೋಜನೆಗಳನ್ನು ರೂಪಿಸಲಾಗಿದೆ. ಜ್ಞಾನವಿಕಾಸ ಕಾರ್ಯಕ್ರಮದ ಮೂಲಕ ಶಿಸ್ತು, ಸ್ವಚ್ಛತೆ, ಧ್ಯಾನದ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಸ್ವಸ್ಥ ಸಮಾಜ ನಿರ್ಮಾಣಕ್ಕೆ ಶ್ರಮಿಸಲಾಗುತ್ತಿದೆ ಎಂದರು.
ನಗರಸಭೆ ಕಾನೂನು ಸಲಹೆಗಾರ್ತಿ ರಾಜೇಶ್ವರಿ ಸುರೇಶ ಮಾತನಾಡಿ, ಸ್ವಸ್ಥ ಸಮಾಜ ನಿರ್ಮಾಣ ಮತ್ತು ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರು ಪಾತ್ರ ಪ್ರಮುಖವಾಗಿದ್ದು, ಕಾರ್ಯಾಗಾರದ ಮೂಲಕ ಮಹಿಳೆಯರನ್ನು ಸ್ವಾವಲಂಬಿಗಳಾಗಿ ಮಾಡಲಾಗುತ್ತಿದೆ ಎಂದರು.
ಬಾಲಕರ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕಿ ಲಲಿತಾ ಕಂದಗಲ್, ದೇವಾಲಯದ ಮುಖ್ಯಸ್ಥ ಶಂಕರನಾಗ ನರಸಪ್ಪ ಗೌಳಿ, ಮುಖಂಡ ಶಂಕರನಾಯ್ಕ, ಟ್ರಸ್ಟ್ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಹಿರಿಂಜ ಸೇರಿ ಸೇವಾ ಪ್ರತಿನಿಧಿಗಳು ಮತ್ತು ಜ್ಞಾನ ವಿಕಾಸ ಕಾರ್ಯಕ್ರಮದ ಸದಸ್ಯರಿದ್ದರು.