

ಶನಿವಾರಸಂತೆ: ಸಮೀಪದ ಆಲೂರು ಸಿದ್ದಾಪುರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಹಲವು ದಾನಿಗಳು ಕ್ರೀಡಾ ಸಮವಸ್ತ್ರ, ಕ್ರೀಡಾ ಪರಿಕರ ಹಾಗೂ ಪೀಠೋಪಕರಣಗಳನ್ನು ದಾನವಾಗಿ ಇತ್ತೀಚೆಗೆ ನೀಡಿದರು.
ಆಲೂರು ಸಿದ್ದಾಪುರ ರೋಟರಿ ಮಲ್ಲೇಶ್ವರ ಕ್ಲಬ್ ಸದಸ್ಯ ಮತ್ತು ಪ್ರಗತಿಪರ ಕೃಷಿಕ ಎ.ಎಸ್.ರಾಮಣ್ಣ ಹಾಗೂ ನಿವೃತ್ತ ಸಹ ಶಿಕ್ಷಕ ಫೆಲೆಕ್ಸ್ ಪಿಂಟೊ ಜತೆಗೂಡಿ ಟ್ರ್ಯಾಕ್ ಪ್ಯಾಂಟ್ ಮತ್ತು ಟೀ ಶರ್ಟ್ ನೀಡಿದ್ದಾರೆ. ಅದೇ ರೀತಿ ಆಲೂರು ಸಿದ್ದಾಪುರ ಗ್ರಾ.ಪಂ. ವತಿಯಿಂದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಹರೀಶ್ ಶಾಲೆಗೆ ಕ್ರೀಡಾ ಉಪಕರಣಗಳನ್ನು ನೀಡಿದ್ದಾರೆ. ಆಲೂರು ಸಿದ್ದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎಸ್.ಲೀಲಾಕುಮಾರ್ ಕ್ರೀಡಾ ಸಾಮಗ್ರಿಗಳನ್ನು ನೀಡಿದ್ದಾರೆ. ಬೆಂಗಳೂರಿನ ಬಿಬಿಎಂಪಿ ನಿವೃತ್ತ ಇಂಜಿನಿಯರ್ ಮತ್ತು ಸ್ಥಳೀಯ ನಿವಾಸಿ ಸೋಮಯ್ಯ ಶಾಲಾ ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರಗಳನ್ನು ನೀಡಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಕೊಡುಗೆ ನೀಡಿದ ದಾನಿಗಳು ಶಾಲೆಗೆ ತೆರಳಿ ಕ್ರೀಡಾ ಸಾಮಗ್ರಿಗಳನ್ನು ವಿತರಣೆ ಮಾಡಿದರು.
ಶಾಲೆಯ ಮುಖ್ಯ ಶಿಕ್ಷಕ ಉದಯ್‌ಕುಮಾರ್, ದೈಹಿಕ ಶಿಕ್ಷಣ ಶಿಕ್ಷಕ ಕರುಂಬಯ್ಯ, ಶಾಲಾ ಸಹ ಶಿಕ್ಷಕರು ಹಾಜರಿದ್ದರು.