

ಮೈಸೂರು: ನಮ್ಮ ಕಲೆ, ಸಂಸ್ಕೃತಿ ಬೆಳೆದು ಬರಲು ವಿಶ್ವಕರ್ಮ ಜನಾಂಗದ ಕೊಡುಗೆ ಅಪಾರವಾಗಿದೆ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಮೈಸೂರು ಜಿಲ್ಲಾ ವಿಶ್ವಕರ್ಮ ಯುವ ಜಾಗೃತಿ ವೇದಿಕೆಯಿಂದ ನಗರದ ಜಗನ್ಮೋಹನ ಅರಮನೆಯಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾಡಿನ ಕಲೆ, ಸಂಸ್ಕೃತಿ ಇಂದಿಗೂ ನಮ್ಮ ಕಣ್ಣು ಮುಂದೆ ಇರುವಂತೆ ಅನೇಕ ದೇವಾಲಯಗಳನ್ನು ಕೆತ್ತನೆ ಮಾಡಿರುವ ಸಮುದಾಯದ ಕೊಡುಗೆ ಮರೆಯಲು ಸಾಧ್ಯವಿಲ್ಲ. ಸಮಾಜದ ಅವಿಭಾಜ್ಯ ಅಂಗವಾಗಿ ಸಮುದಾಯ ಕೆಲಸ ಮಾಡಿದೆ ಎಂದರು.
ರಾಜ, ಮಹಾರಾಜರು ಸಹ ಸಮುದಾಯಕ್ಕೆ ಸಹಕಾರ ನೀಡಿಕೊಂಡು ಬಂದಿದ್ದು, ಅನೇಕ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಹಾಗಾಗಿ ಸಮುದಾಯಕ್ಕೂ ನಮ್ಮ ಅರಮನೆಗೂ ಹಿಂದಿನಿಂದಲೂ ಸಂಬಂಧ ಇದ್ದು, ನಾವು ಸಹ ಜತೆಗೆ ಇರುತ್ತೇವೆ. ವಿದ್ಯಾರ್ಥಿಗಳು ವಿದ್ಯಾವಂತರಾಗಿ ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅರುಣ್ ಯೋಗಿರಾಜ್, ಕಲೆ ಅರಳಲು ಪರಿಶ್ರಮ ಬೇಕಿದೆ. ಅಂತಹ ಪರಿಶ್ರಮವನ್ನು ಸಮುದಾಯ ಬೆಳೆಸಿಕೊಂಡು ಬಂದಿದ್ದು, ಅನೇಕ ದೇವಾಲಯಗಳಲ್ಲಿ ಅವರ ಕಲೆ ಅರಳಿದೆ. ಅದನ್ನು ಮುಂದಿನ ಪೀಳಿಗೆಗೂ ಉಳಿಸಿ, ಬೆಳೆಸಬೇಕು ಎಂದರು.
ತುಮಕೂರು ಜಿಲ್ಲೆ ನಿಟ್ಟರಹಳ್ಳಿಯ ಅಖಿಲ ಕರ್ನಾಟಕ ವಿಶ್ವಕರ್ಮ ಮಠದ ಡಾ.ಶ್ರೀ ನೀಲಕಂಠಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ರಾಜ್ಯ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎನ್.ನಂದಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಕೆ.ಹರೀಶ್‌ಗೌಡ, ಕೆಪಿಸಿಸಿ ಓಬಿಸಿ ಘಟಕದ ರಾಜ್ಯ ಉಪಾಧ್ಯಕ್ಷೆ ಪವಿತ್ರಾ ಪ್ರಭಾಕರ್ ರೆಡ್ಡಿ, ಮೈಸೂರು ಜಿಲ್ಲಾ ವಿಶ್ವಕರ್ಮ ಯುವ ಜಾಗೃತಿ ವೇದಿಕೆ ಅಧ್ಯಕ್ಷ ಕೆ. ಕೆಂಡಗಣ್ಣ ವಿಶ್ವಕರ್ಮ, ಪ್ರಧಾನ ಕಾರ್ಯದರ್ಶಿ, ಟಿ.ಎ.ಸಿದ್ದರಾಜು, ಮುಖಂಡರಾದ ಮಹಂತೇಶ್ ಬಡಿಗೇರ್, ವಿಶ್ವಕರ್ಮ ಯುವ ಜಾಗೃತಿ ವೇದಿಕೆ ರಾಷ್ಟ್ರೀಯ ಅಧ್ಯಕ್ಷ ಸಂತೋಷ್ ಬಡಿಗೇರ್, ಕೆಎಂಎಫ್‌ನ ಹಿರಿಯ ಉಪ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ, ನಗರಪಾಲಿಕೆ ಮಾಜಿ ಸದಸ್ಯ ರಮೇಶ್ (ರಮಣಿ), ಅಮರಶಿಲ್ಪಿ ಜಕಣಾಚಾರಿ ಸಂಘದ ಕೆಂಪಣ್ಣಾಚಾರ್ಯ, ಉದ್ಯಮಿ ಗೋಲ್ಡ್ ಸುರೇಶ್ ಇತರರು ಇದ್ದರು.
ಕಾರ್ಯಕ್ರಮದಲ್ಲಿ ಶಿಲ್ಪಿ ಅರುಣ್ ಯೋಗಿರಾಜ್, ಹುಬ್ಬಳ್ಳಿ-ಧಾರವಾಡ ಮೇಯರ್ ರಾಮಣ್ಣ ಬಡಿಗೇರ್, ಖಾಸಗಿ ವಾಹಿನಿ ವಿವಿಧ ಸ್ಪರ್ಧೆ ವಿಜೇತರಾದ ಕಾರ್ತಿಕ್ ಮಹೇಶ್, ಪ್ರಿಯಾಂಕಾ ಅವರಿಗೆ ವಿಶ್ವಕರ್ಮ ರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.