

ಬೆಟ್ಟದಪುರ: ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡುಗೆ ಅಪಾರ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ನಿಕಟಪೂರ್ವ ಅಧ್ಯಕ್ಷ ಗೊರಹಳ್ಳಿ ಜಗದೀಶ್ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ವತಿಯಿಂದ ಗುರುವಾರ ಬೆಕ್ಕರೆ ಗ್ರಾಮದಲ್ಲಿ ಶ್ರೀ ದುರ್ಗಾ ಜ್ಞಾನವಿಕಾಸ ಕೇಂದ್ರದ ವತಿಯಿಂದ ಸದಸ್ಯರಿಗೆ ಹಮ್ಮಿಕೊಂಡಿರುವ ಟೈಲರಿಂಗ್ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕುಟುಂಬ ನಿರ್ವಹಣೆಯಲ್ಲಿ ಪುರುಷರಷ್ಟೇ ಪ್ರಧಾನ ಪಾತ್ರ ಮಹಿಳೆಯರದ್ದು ಇದೆ. ಸತಿ-ಪತಿ ಒಂದೇ ನಾಣ್ಯದ ಎರಡು ಮುಖಗಳಂತೆ. ಪರಸ್ಪರ ಅನ್ಯೂನ್ಯತೆಯಿಂದ ಇದ್ದರೆ ಕುಟುಂಬದ ಅಭಿವೃದ್ಧಿ ಸಾಧ್ಯ. ಮಹಿಳೆಯರು ಸಹ ಸ್ವಾವಲಂಬಿ ಉದ್ಯೋಗಗಳ ತರಬೇತಿ ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದು ಕಿವಿಮಾತು ಹೇಳಿದರು.
ಸಂಸ್ಥೆಯ ಬೆಟ್ಟದಪುರ ಯೋಜನಾಧಿಕಾರಿ ಸಂತೋಷ್‌ಕುಮಾರ್ ಜೈನ್ ಮಾತನಾಡಿ, ಮಹಿಳೆಯರು ಸ್ವ-ಸಹಾಯ ಸಂಘಗಳನ್ನು ರಚಿಸಿ ಸಂಸ್ಥೆಯ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವ ಜತೆಗೆ ಸಂಸ್ಥೆಯ ವತಿಯಿಂದ ಸ್ವಾವಲಂಬಿ ಉದ್ಯೋಗಗಳ ಉಚಿತ ತರಬೇತಿ ನೀಡಲಾಗುತ್ತಿದೆ ಎಂದರು.
ಮುಖಂಡ ಕೆ.ಎಸ್ ಷಣ್ಮುಖಾರಾಧ್ಯ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಡುಗೆ ಅಪಾರವಾಗಿದೆ. ಮಹಿಳೆಯರು ಸಹ ಪುರುಷರಷ್ಟೇ ಸರಿ ಸಮಾನರು ಎಂಬುದನ್ನು ನಿರೂಪಿಸಲು ಸಂಸ್ಥೆಯ ಹಲವು ನೂತನ ಯೋಜನೆಗಳು ಸಹಕಾರಿಯಾಗಿವೆ. ಸರ್ಕಾರೇತರ ಸಂಸ್ಥೆಯಾಗಿ ಸಮಾಜದ ಬದಲಾವಣೆಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಕೊಡಗು ಜಿಲ್ಲೆಯ ಸಿರಿಧಾನ್ಯ ಉತ್ಪನ್ನಗಳ ಮೇಲ್ವಿಚಾರಕಿ ರಜನಿ ಮಾತನಾಡಿ, ಸಿರಿಧಾನ್ಯಗಳ ಬಳಕೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.
ಟೈಲರಿಂಗ್ ತರಬೇತಿ ಶಿಕ್ಷಕಿ ಸಾಹೇರಾ ಮಾತನಾಡಿ, ಮಹಿಳೆಯರು ಕುಟುಂಬ ನಿರ್ವಹಣೆಗಾಗಿ ಬಿಡುವಿನ ವೇಳೆಯಲ್ಲಿ ಟೈಲರಿಂಗ್ ಮಾಡುವ ಮೂಲಕ ಅದರಿಂದ ಬರುವ ಆದಾಯದಲ್ಲಿ ಆರ್ಥಿಕವಾಗಿ ಸಬಲರಾಗಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭವಾನಿ ಷಣ್ಮುಖಾರಾಧ್ಯ ವಹಿಸಿದ್ದರು. ಜ್ಞಾನ ವಿಕಾಸ ಯೋಜನೆ ಸಮಾನ್ವಯಾಧಿಕಾರಿ ಮಮಿತಾ ಕಾರ್ಯಕ್ರಮ ಕುರಿತು ಮಾತನಾಡಿದರು. ಗ್ರಾಮ ಪಂಚಾಯಿತಿ ಸದಸ್ಯೆ ಜ್ಯೋತಿ ರವಿಕುಮಾರ್, ಒಕ್ಕೂಟ ಅಧ್ಯಕ್ಷೆ ರೂಪಾ, ಮುಖಂಡರಾದ ಚಂದ್ರಶೇಖರ್ ನಂಜಪ್ಪ ಹಾಗೂ ಒಕ್ಕೂಟದ ಪದಾಧಿಕಾರಿಗಳು ಸದಸ್ಯರು ಇದ್ದರು.