ಎಚ್.ಸಿ.ದಾಸಪ್ಪ ದಂಪತಿ ಕೊಡುಗೆ ಅವಿಸ್ಮರಣೀಯ: ನಿವೃತ್ತ ಅಧಿಕಾರಿ ಡಾ.ಪಿ.ಬೋರೇಗೌಡ ಅಭಿಮತ

3
Published on

ಮೈಸೂರು: ಸ್ವಾತಂತ್ರೃ ಹೋರಾಟಗಾರರಾಗಿದ್ದ ಮಾಜಿ ಸಚಿವ ದಿವಂಗತ ಎಚ್.ಸಿ.ದಾಸಪ್ಪ ಸ್ಮರಣಾರ್ಥ ಸ್ಥಾಪಿತವಾಗಿರುವ ಎಚ್.ಸಿ.ದಾಸಪ್ಪ ಸಾರ್ವಜನಿಕ ವಿಚಾರ ಸಂಸ್ಥೆಯ ಕಚೇರಿ ನಿರ್ಮಾಣ ಕಾರ್ಯಕ್ಕೆ ಶುಕ್ರವಾರ ನಗರದ ಗಂಗೋತ್ರಿ ಬಡಾವಣೆಯ ಸಿಎ ನಿವೇಶನದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಯಿತು.
ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ, ಮಾಜಿ ಮೇಯರ್ ಪಿ.ವಿಶ್ವನಾಥ್ ಮಾತನಾಡಿ, ಎಚ್.ಸಿ.ದಾಸಪ್ಪ ಅವರ ವಿಚಾರಧಾರೆಗಳು ಸ್ಥಿರಸ್ಥಾಯಿಯಾಗಲು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ಯಶೋಧರಾ ದಾಸಪ್ಪ ಮತ್ತು ಇವರ ಮಗ ಮಾಜಿ ಸಂಸದ ಎಚ್.ಡಿ.ತುಳಸಿ ದಾಸ್ ಅವರು ಎಚ್.ಸಿ.ದಾಸಪ್ಪ ಸಾರ್ವಜನಿಕ ವಿಚಾರ ಸಂಸ್ಥೆಯನ್ನು 1974ರಲ್ಲಿ ಸ್ಥಾಪಿಸಿದ್ದರು ಎಂದರು.
ನಗರದ ಪುರಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂದಿನ ರಾಷ್ಟ್ರಪತಿ ವಿ.ವಿ.ಗಿರಿ ಉದ್ಘಾಟನೆ ನೆರವೇರಿಸಿದ್ದರು. ಆರ್ಥಿಕ ಕಾರಣಗಳಿಂದ ಸಂಸ್ಥೆಗೆ ಅಂದಿನ ಸಿಐಟಿಬಿ ನೀಡಿದ್ದ ನಿವೇಶನದಲ್ಲಿ ಎಚ್.ಸಿ.ದಾಸಪ್ಪ ಸ್ಮಾರಕ ಭವನ ನಿರ್ಮಿಸಲು ಸಾಧ್ಯವಾಗಿರಲಿಲ್ಲ. ಈಗ ದಾನಿಗಳ ಸಹಾಯದಿಂದ ನಿರ್ಮಾಣ ಕಾರ್ಯಕ್ಕೆ ಅಂಕಿತ ಹಾಕುತ್ತಿರುವುದು ಸಂತಸದ ವಿಷಯ ಎಂದರು.
ಎಚ್.ಸಿ.ದಾಸಪ್ಪ ಸಾರ್ವಜನಿಕ ವಿಚಾರ ಸಂಸ್ಥೆಯ ಕಾರ್ಯದರ್ಶಿ ಸರೋಜಾ ತುಳಸಿದಾಸ್ ಮಾತನಾಡಿ, ನಮ್ಮ ಮಾವ ಎಚ್.ಸಿ.ದಾಸಪ್ಪ ಅವರ ವಿಚಾರಧಾರೆಗಳನ್ನು ನವ ಪೀಳಿಗೆಗೆ ತಿಳಿಸುವ ಪ್ರಯತ್ನವಾಗಿ ಈ ಸಂಸ್ಥೆ ಸ್ಥಾಪಿತವಾಗಿತ್ತು. ಸಂಸ್ಥೆಯ ಪದಾಧಿಕಾರಿಗಳ ಸರ್ವ ಪ್ರಯತ್ನದಿಂದ 5 ಕೋಟಿ ರೂ. ವೆಚ್ಚದಲ್ಲಿ ಎಚ್.ಸಿ.ದಾಸಪ್ಪ ಮತ್ತು ಯಶೋಧರಾ ದಾಸಪ್ಪ ಸ್ಮಾರಕ ಭವನ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ 50 ಲಕ್ಷ ರೂ. ಅನುದಾನ ಮಂಜೂರಾಗಿತ್ತು. ಅದನ್ನೂ ಸದ್ವಿನಿಯೋಗಿಸಿಕೊಳ್ಳಲಾಗದೆ, ಅನುದಾನದ ಹಣ ಹಿಂದಿರುಗಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ಆದರೆ ಈಗ ರಾಜ್ಯ ಸರ್ಕಾರದ ವಿಶ್ರಾಂತ ವಿಶೇಷ ಕಾರ್ಯದರ್ಶಿ ಡಾ.ಪಿ.ಬೋರೇಗೌಡ ಅವರು ಶ್ರಮವಹಿಸಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದಕ್ಕೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಡಾ.ಪಿ.ಬೋರೇಗೌಡ ಮಾತನಾಡಿ, ಕರ್ನಾಟಕ ಕಂಡ ಅತ್ಯುನ್ನತ ಮತ್ತು ಸಂಭಾವಿತ ರಾಜಕೀಯ ನಾಯಕರಾಗಿದ್ದ ಎಚ್.ಸಿ.ದಾಸಪ್ಪ ಮತ್ತು ಯಶೋಧರಾ ದಾಸಪ್ಪ ದಂಪತಿ ಸಾಮಾಜಿಕ ಕೊಡುಗೆ ಅವಿಸ್ಮರಣೀಯ. ಎಚ್.ಸಿ.ದಾಸಪ್ಪ ತಂದೆ ಎಚ್.ಚೆನ್ನಯ್ಯ ಕರ್ನಾಟಕದ ಮೊದಲ ಪ್ರಾದೇಶಿಕ ಪಕ್ಷ ಪ್ರಜಾಮಿತ್ರ ಮಂಡಳಿ ಸಂಸ್ಥಾಪಕ ಅಧ್ಯಕ್ಷರು. ಹಾಗೇಯೇ ಯಶೋಧರಾ ಅವರ ತಂದೆ ಕೆ.ಎಚ್.ರಾಮಯ್ಯ ಅವರು ರಾಜ್ಯ ಒಕ್ಕಲಿಗ ಸಂಘದ ಸಂಸ್ಥಾಪಕರು. ಇವರಿಬ್ಬರ ಹೋರಾಟದಿಂದಲೇ ಮೈಸೂರು ರಾಜಸಂಸ್ಥಾನದಲ್ಲಿ ಮೊದಲ ಬಾರಿ ಹಿಂದುಳಿದ ವರ್ಗಕ್ಕೆ ಮೀಸಲಾತಿ ಜಾರಿಗೆ ಬಂತು ಎಂದು ಸ್ಮರಿಸಿದರು.
ಮೊದಲ ಮಹಿಳಾ ಸಚಿವೆ ಎನಿಸಿದ ಯಶೋಧರಾದಾಸಪ್ಪ ಅವರು ಗಾಂಧೀಜಿ ಆಶಯದಂತೆ ರಾಜ್ಯದಲ್ಲಿ ಮದ್ಯಪಾನ ನಿಷೇಧಗೊಳಿಸದಿದ್ದಕ್ಕೆ ನಿಜಲಿಂಗಪ್ಪ ಸಂಪುಟಕ್ಕೆ ರಾಜೀನಾಮೆ ಕೊಟ್ಟು ಹೊರ ನಡೆದ ಧೀರ ಮಹಿಳೆ. ಇಂಥ ಮಹನೀಯರು ಸ್ಥಾಪಿಸಿದ ಸಂಸ್ಥೆಗೆ ತಾವು ಅಳಿಲು ಕಾಣಿಕೆ ಸಲ್ಲಿಸುತ್ತಿದ್ದೇನೆ ಎಂದು ತಿಳಿಸಿದರು.
ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಗುಂಡಪ್ಪಗೌಡ, ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎನ್.ಎಸ್.ರಾಮೇಗೌಡ, ನಿವೃತ್ತ ಐಜಿಪಿ ಅರ್ಕೇಶ್, ಮೈಸೂರು ನಗರಪಾಲಿಕೆ ನಿವೃತ್ತ ಆಯುಕ್ತ ಡಾ.ಕೆ.ಎನ್.ಚಂದ್ರಶೇಖರ್, ನಿವೃತ್ತ ಡಿಡಿಪಿಐ ಕೆಂಪರಾಜೇಗೌಡ, ವಿದ್ಯುತ್ ಇಲಾಖೆ ನಿವೃತ್ತ ಮುಖ್ಯ ಇಂಜಿನಿಯರ್ ಚಂದ್ರಶೇಖರ್, ನೇಗಿಲಯೋಗಿ ಟ್ರಸ್ಟ್‌ನ ಡಿ.ರವಿಕುಮಾರ್, ಕಂಪ್ಯೂಟರ್ ಇಂಜಿನಿಯರ್ ವೆಂಕಟೇಶ್, ಎಚ್.ಸಿ.ದಾಸಪ್ಪ ಸಾರ್ವಜನಿಕ ವಿಚಾರ ಸಂಸ್ಥೆಯ ಪತ್ರಿಕಾ ಕಾರ್ಯದರ್ಶಿ ಎಸ್.ಪ್ರಕಾಶ್ ಬಾಬು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net