

ಸವಣೂರ: ಸಹಕಾರ ರಂಗ ಗಟ್ಟಿಯಾಗಿರುವ ದೇಶದ ಆರ್ಥಿಕತೆ ಬಲಿಷ್ಠವಾಗಿರುತ್ತದೆ. ನಮ್ಮ ದೇಶದಲ್ಲಿ ಹಲವು ರಾಜ್ಯಗಳು ಇದರಿಂದ ಬಲಿಷ್ಠವಾಗಿವೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಸವಣೂರ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ರೈತರಿಗೆ ಇದು ನಮ್ಮ ಸಂಸ್ಥೆ ಎಂಬ ಭಾವನೆ ಬಂದಾಗ ಅವರು ಸಹಕಾರಿ ಸಂಘಕ್ಕೆ ಬರುತ್ತಾರೆ. ವಿಶ್ವಾಸಾರ್ಹತೆ ಬರುವಂತೆ ದರ ಮತ್ತು ತೂಕದಲ್ಲಿ ನ್ಯಾಯಸಮ್ಮತವಾಗಿ ವ್ಯವಹರಿಸಿ ರೈತರ ವಿಶ್ವಾಸ ಗಳಿಸಿದಾಗ ಐವತ್ತನೇ ವರ್ಷಾಚರಣೆ ಅರ್ಥಪೂರ್ಣವಾಗಲಿದೆ ಎಂದರು.
ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ಶೇಖರಣೆ ಇದ್ದು, ಅಕ್ಕಿ ರಫ್ತು ಮಾಡುವ ಚಿಂತನೆ ಮಾಡಲಾಗುತ್ತಿದೆ. ರೈತರು ಬೆಳೆದ ಬೆಳೆಗಳನ್ನು ಸಹಕಾರಿ ಸಂಘದ ಗೋದಾಮಿನಲ್ಲಿ ಶೇಖರಿಸಿಟ್ಟಾಗ ರಾಷ್ಟ್ರೀಕೃತ ಬ್ಯಾಂಕ್ನಿಂದ ಸಾಲ ಸೌಲಭ್ಯ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಸಹಕಾರಿ ಸಂಘದ ಅಧ್ಯಕ್ಷ ಧರಿಯಪ್ಪಗೌಡ ಪಾಟೀಲ, ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಮಾತನಾಡಿದರು. ಪ್ರಗತಿಪರ ರೈತರನ್ನು, ಹಿರಿಯ ಸಹಕಾರಿಗಳನ್ನು ಸನ್ಮಾನಿಸಲಾಯಿತು.
ಬಿಜೆಪಿ ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಡಾ. ಶೋಭಾ ನಿಸ್ಸೀಮಗೌಡ್ರ, ನಿರ್ದೇಶಕ ಸುಭಾಸ ಗಡೆಪ್ಪನವರ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಿ.ಎಂ. ಪಾಟೀಲ, ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷ ಶಿವಾನಂದ ಸಂಗಾಪೂರ, ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಎಸ್.ವೈ. ಪಾಟೀಲ, ಭರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ಮಾಲತೇಶ ಮೆಣಸಿನಕಾಯಿ, ಗಂಗಾಧರ ಬಾಣದ, ಎಸ್.ಸಿ. ಸುಣಗಾರ, ಸಹಕಾರಿ ಸಂಘದ ಉಪಾಧ್ಯಕ್ಷ ನಿಂಗನಗೌಡ ಪಾಟೀಲ, ನಿರ್ದೇಶಕರಾದ ರುದ್ರಗೌಡ ಪಾಟೀಲ, ಉಡಚಪ್ಪ ಬಡಲಿಂಗಪ್ಪನರ, ಬಿ.ಎಸ್. ಪಾಟೀಲ, ಲಕ್ಷ್ಮಣ ಕದಂ, ಬಸಯ್ಯ ಮಹಾಂತಿನಮಠ, ರಾಮಣ್ಣ ಕಳಸದ, ಚಂದ್ರಶೇಖರ ಕಂಬಳಿ, ಪರಸಪ್ಪ ಗೌಳೇರ, ನೀಲಪ್ಪ ಹರಿಜನ, ನಿರ್ಮಲಾ ದೊಡ್ಡಗೌಡ್ರ, ದ್ಯಾಮವ್ವ ಧರೆಪ್ಪನವರ, ಕಾರ್ಯದರ್ಶಿ ಸುರೇಶ ಕುರವತ್ತಿ ಇತರರಿದ್ದರು. ಶಿಕ್ಷಕ ಬಿ.ಎಸ್. ಚಳ್ಳಾಳ, ಚನ್ನಪ್ಪ ಕುಂಬಾರ ನಿರ್ವಹಿಸಿದರು.