

ಮಡಿಕೇರಿ: ಬಾಡಗ ೧ ಅಂಗನವಾಡಿ ಕೇಂದ್ರದಲ್ಲಿ ಬಾಲ ಮೇಳ, ಸೀಮಂತ ಕಾರ್ಯಕ್ರಮ ವಿವಿಧ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಮುದಾಯದ ವಿವಿಧ ಕೊಡುಗೆ ಪಡೆಯುವುದರ ಮೂಲಕ ಅರ್ಥಪೂರ್ಣವಾಗಿ ನೆರವೇರಿತು.
ಈ ಸಂದರ್ಭ ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ಅಂಗನವಾಡಿ ಕೇಂದ್ರದಲ್ಲಿನ ಮಕ್ಕಳಲ್ಲಿ ಸಮಾನತೆ, ಶಿಸ್ತು, ಮೂಡಿಸುವ ನಿಟ್ಟಿನಲ್ಲಿ ದಾನಿಗಳಿಂದ ಸಮವಸ್ತ್ರ ನೀಡಲಾಗಿದೆ. ಅಲ್ಲದೇ, ಮಕ್ಕಳಲ್ಲಿ ಪ್ರಾರಂಭಿಕ ಹಂತದಲ್ಲೇ ರಾಸಾಯನಿಕ ಮುಕ್ತ ಆಹಾರ ಬಳಸುವಂತೆ ಮಾಡಲು ಮಕ್ಕಳ ಹೆಸರಿನ ತರಕಾರಿ ಪಾಟ್‌ಗಳನ್ನು ದಾನಿಗಳು ನೀಡಿದ್ದಾರೆ. ಇಂತಹ ಅಂಗನವಾಡಿ ಕಾರ್ಯಕರ್ತೆಯರು ಇತರೆ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾದರಿ ಎಂದ ಅವರು, ಇಲಾಖೆಯ ಗೌರವ ಹೆಚ್ಚಿಸುವಂತಹ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಧನ್ಯವಾದ ಅರ್ಪಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಮೌಳಿ ಮಾತನಾಡಿ, ಅಧಿಕಾರಿ ಸವಿತಾ ಅವರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ವ್ಯಾಪ್ತಿಯ ಹಲವಾರು ಅಂಗನವಾಡಿ ಕೇಂದ್ರವನ್ನು ಮಾದರಿಯ ಅಂಗನವಾಡಿ ಕೇಂದ್ರವನ್ನಾಗಿ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಗ್ರಾಮ ಪಂಚಾಯತಿ ಅಧ್ಯಕ್ಷ ಕುಶನ್ ರೈ ಮಾತನಾಡಿ, ಇದೊಂದು ಬಹಳ ಉತ್ತಮ ಕಾರ್ಯಕ್ರಮವಾಗಿದೆ. ಇಂತಹ ಕಾರ್ಯಕ್ರಮಕ್ಕೆ ಮಕ್ಕಳ ಭಾಗವಹಿಸಿಕೆ ಅತ್ಯುತ್ತಮವಾಗಿದೆ. ಪಾಲಕರ ಸಹಕಾರ ಪಡೆದು ಮತ್ತಷ್ಟು ಇದೇ ರೀತಿ ಕಾರ್ಯಕ್ರಮ ಮಾಡುವಂತೆ ಕರೆ ನೀಡಿದ ಅವರು, ಗ್ರಾಮ ಪಂಚಾಯಿತಿಯಿಂದ ದೊರಕಬೇಕಾದಂತ ಸಂಪೂರ್ಣ ಸಹಕಾರವನ್ನು ಅಂಗನವಾಡಿ ಕೇಂದ್ರಗಳಿಗೆ ನೀಡುವುದಾಗಿ ಭರವಸೆ ನೀಡಿದರು.
ಸುಸಜ್ಜಿತ ಕಾರ್ಯಕ್ರಮಕ್ಕೆ ಸಹಕರಿಸಿದ ಹಾಗೂ ಕೇಂದ್ರಕ್ಕೆ, ಮಕ್ಕಳಿಗೆ ಕೊಡುಗೆ ನೀಡಿದ ಧಾನಿಗಳಾದ ಶಾಂತಿ ಮುಕೇಶ್, ಹರೀಶ್ ರೈ, ದರ್ಶನ್, ಚೈತ್ರ, ಕುಸುಮ, ಚಂದ್ರಿಕಾ, ಭಾಗ್ಯಲಕ್ಷ್ಮಿ ಫಲಾನುಭವಿಗಳು, ಪೋಷಕರು, ಶ್ರೀ ಭಗವತಿ, ಶ್ರೀ ವಿನಾಯಕ ಸ್ತ್ರೀಶಕ್ತಿ ಗುಂಪಿನ ಸದಸ್ಯರುಗಳಿಗೆ ಉತ್ತಮ ಮಾರ್ಗದರ್ಶನಕ್ಕಾಗಿ ಸವಿತಾ ಕೀರ್ತನ್, ಜಯಂತಿಯವರಿಗೆ ಬಾಲವಿಕಾಸಸಮಿತಿ ಸದಸ್ಯರ ವತಿಯಿಂದ ಪದಕ ನೀಡುವುದರ ಮೂಲಕ ಸನ್ಮಾನಿಸಲಾಯಿತು.
ಬಾಡಗ ಅಂಗನವಾಡಿ ಕೇಂದ್ರದ ಫಲಾನುಭವಿ ದೇಚಮ್ಮ ಉಮೇಶ್ ರವರಿಗೆ ಪೋಷಣ್ ಅಭಿಯಾನ ಯೋಜನೆಯಡಿ ಸಮುದಾಯ ಆಧಾರಿತ ಚಟುವಟಿಕೆಯಡಿ ಸೀಮಂತ ಕಾರ್ಯಕ್ರಮ ನೆರವೇರಿತು.