ಅಲಕ್ಷಿತ ವರ್ಗಕ್ಕೆ ಅರಸು ಕೊಡುಗೆ ಅಪಾರ ಶಾಸಕ ತಿಪ್ಪಾರೆಡ್ಡಿ ಅನಿಸಿಕೆ

CTD 26 Mla-05
Published on

ಚಿತ್ರದುರ್ಗ: ಅಲಕ್ಷಿತ ಸಮುದಾಯಗಳ ಕುರಿತು ಕಾಳಜಿ ಹೊಂದಿದ್ದ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ವೇಳೆ ಹಲವು ಯೋಜನೆ ಜಾರಿಗೊಳಿಸಿದರು. ಅಲ್ಲದೆ, ರಾಜಕೀಯ ಸ್ಥಾನಮಾನ ಕೂಡ ನೀಡಿದರು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಸ್ಮರಿಸಿದರು.

ತರಾಸು ರಂಗಮಂದಿರದ ಮುರುಘ ರಾಜೇಂದ್ರ ಒಡೆಯರ್ ವೇದಿಕೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಲಕ್ಷಿತ ಸಮುದಾಯಗಳ ಸಮಾವೇಶ, ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕರ್ಪೂರಿ ಠಾಕೂರ್ ಹೋರಾಟದ ಹಾದಿಯಲ್ಲೇ ಸಾಗಿ ಎರಡು ಬಾರಿ ಬಿಹಾರದ ಮುಖ್ಯಮಂತ್ರಿಯಾಗಿದ್ದರು. ಅವರ ಹೆಸರಿನಲ್ಲಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರಿಗೆ ಪ್ರಶಸ್ತಿ ನೀಡಿರುವುದು ಅರ್ಥಪೂರ್ಣ ಮತ್ತು ಸಂತಸದ ವಿಚಾರ ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಟಿ.ರಘುಮೂರ್ತಿ, ರಾಜಕೀಯ ಕ್ಷೇತ್ರವೀಗ ಕೆಸರು ಗದ್ದೆಯಂತಾಗಿದೆ. ಮೌಲ್ಯಗಳ ಸಮೀಪ ಇರುವವರು ಮಾತ್ರ ಉತ್ತಮ ನಾಯಕರಾಗಿ ಹೊರಹೊಮ್ಮಲು ಸಾಧ್ಯ ಎಂಬ ವಾಸ್ತವ ಸತ್ಯ ಎಂದು ಹೇಳಿದರು.

ಜನಪರವಾಗಿ ಉತ್ತಮ ಕೆಲಸ ಮಾಡುವ ವೇಳೆಯೂ ರಾಜಕೀಯದಲ್ಲಿದ್ದಾಗ ಸಾಕಷ್ಟು ಟೀಕೆ ಟಿಪ್ಪಣಿ ಎದುರಾಗುತ್ತವೆ. ಎಲ್ಲವನ್ನು ಮೀರಿ ಜನರ ಬಳಿ ಹೋದಾಗ ಮಾತ್ರ ಸಮಾಜ ಗುರುತಿಸಿ ಗೌರವಿಸುತ್ತದೆ ಎಂದರು.

ದಲಿತ, ನೀರಾವರಿ, ರೈಲ್ವೆ ಸೇರಿ ವಿವಿಧ ಚಳವಳಿಯಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಿದ್ದ ಎಂ.ಜಯಣ್ಣ, ಮುರುಘ ರಾಜೇಂದ್ರ ಒಡೆಯರ್ ದೈಹಿಕವಾಗಿ ನಮ್ಮೊಂದಿಗಿಲ್ಲ. ಆದರೆ, ಅವರಿಬ್ಬರ ಕೆಲಸ ಇಂದಿಗೂ ಶಾಶ್ವತವಾಗಿ ಉಳಿದಿವೆ. ಹೀಗಾಗಿ ಮೌಲ್ಯಕ್ಕೆ ಯಾವಾಗಲೂ ಬೆಲೆ ಇದೆ ಎಂಬ ಸತ್ಯವನ್ನು ಎಲ್ಲರೆ ನಿಸ್ವಾರ್ಥರ ಸಂಖ್ಯೆ ಹೆಚ್ಚಿ, ಉತ್ತಮ ಸಮಾಜ ನಿರ್ಮಾಣ ಆಗಲಿದೆ ಎಂದು ಹೇಳಿದರು.

ಪೊಲೀಸ್ ಅಧಿಕಾರಿ ರೇವತಿ ಅವರ ತಲ್ಲಣಿಸದಿರು ಓ ಮನವೆ ಪುಸ್ತಕ ಬಿಡುಗಡೆ ಮಾಡಲಾಯಿತು. ಅಲಕ್ಷಿತ ವೇದಿಕೆ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ ಸಂಪಿಗೆ, ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಸಿದ್ದರಾಜು, ಚಿಂತಕ ಡಾ.ಎಂ.ಎಸ್.ಮಣಿ, ರಾಜ್ಯ ಕಾಡುಗೊಲ್ಲ ಬುಡಕಟ್ಟು ಮಹಾಸಭಾದ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಇತರರು ಮಾತನಾಡಿದರು.

ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ.ನಿಶಾನಿ ಜಯಣ್ಣ, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಎನ್.ಚಂದ್ರಶೇಖರ್, ಜಿಪಂ ಮಾಜಿ ಅಧ್ಯಕ್ಷೆ ಶಶಿಕಲಾ, ಮಾಜಿ ಸದಸ್ಯೆ ಶಾಂತಮ್ಮ, ವಿವಿಧ ಸಂಘಟನೆಯ ಪದಾಧಿಕಾರಿಗಳಾದ ಎಂ.ವಿ.ಪವಿತ್ರಾ, ಟಿಪ್ಪು ಖಾಸಿಂ ಆಲಿ, ಎನ್.ಡಿ.ಕುಮಾರ್, ಎಂ.ಶಂಕರಮೂರ್ತಿ ವಿಶ್ವಕರ್ಮ, ವೀರಭದ್ರಪ್ಪ, ಎನ್.ಬಿ.ಮಹಮದ್ ಮನ್ಸೂರ್ ಇತರರಿದ್ದರು.

ರಾಜ್ಯ ಅಲಕ್ಷಿತ ಸಮುದಾಯಗಳ ಮಹಾವೇದಿಕೆ, ದೇವರಾಜ ಅರಸು ಜನಸೇವಾ ಪ್ರತಿಷ್ಠಾನ, ರಿದ್ಧಿ ಫೌಂಡೇಷನ್ ಟ್ರಸ್ಟ್ ವತಿಯಿಂದ ಸಮಾವೇಶ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net