ನಾರಿಯರ ಸಬಲೀಕರಣಕ್ಕೆ ಸಹಕಾರಿ

HSD GURHA LASHMI 30 (2)
Published on

ಹೊಸದುರ್ಗ: ಗೃಹಲಕ್ಷ್ಮೀ ಯೋಜನೆಯ ಮೂಲಕ ಮಹಿಳಾ ಸಬಲೀಕರಣಕ್ಕೆ ಸಹಕಾರ ನೀಡಿರುವ ಕಾಂಗ್ರೆಸ್ ಪಕ್ಷದ ಕಾರ್ಯವನ್ನು ಸ್ಮರಿಸುವ ಕೆಲಸಕ್ಕೆ ಮಹಿಳೆಯರೇ ಚಾಲನೆ ನೀಡಬೇಕು ಎಂದು ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಮನವಿ ಮಾಡಿದರು.

ಪಟ್ಟಣದಲ್ಲಿ ಬುಧವಾರ ಪುರಸಭೆ ಆಯೋಜಿಸಿದ್ದ ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ ಮಹಿಳೆಯರಿಗೆ ನೀಡಿದ್ದ ಭರವಸೆಯಂತೆ ಗೃಹಲಕ್ಷ್ಮೀ ಯೋಜನೆಯ ಮೂಲಕ ಪ್ರತಿ ಮನೆಯ ಯಜಮಾನಿಗೆ 2 ಸಾವಿರ ಹಣ ನೀಡುತ್ತಿದೆ. ಪ್ರತಿ ತಿಂಗಳು ಮಹಿಳೆಯರ ಖಾತೆಗೆ ಹಣ ನೇರ ಜಮಾ ಅಗಲಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಇಂತಹ ಬೃಹತ್ ಯೋಜನೆಯನ್ನು ಕಾಂಗ್ರೆಸ್ ಜಾರಿಗೊಳಿಸಿದೆ ಎಂದರು.

ತಾಲೂಕಿನಲ್ಲಿ ಇಲ್ಲಿಯವರೆಗೆ 47737 ಮಂದಿ ಗೃಹಲಕ್ಷ್ಮೀ ಯೋಜನೆಗೆ ನೊಂದಣಿ ಮಾಡಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಗೆ ಪ್ರತಿ ತಿಂಗಳು 70 ಕೋಟಿ ಹಣ ಸಂದಾಯವಾಗಲಿದೆ. ಸೆ.4ರಿಂದ ತಾಲೂಕಿನ ಪ್ರತಿ ಗ್ರಾಪಂ ಕೇಂದ್ರಗಳಲ್ಲಿ ಕಾರ್ಯಕ್ರಮ ಆಯೋಜಿಸುವ ಮೂಲಕ ಫಲಾನುಭವಿಗಳಿಗೆ ಯೋಜನೆಯ ಕುರಿತು ಮಾಹಿತಿ ತಿಳಿಸಲಾಗುವುದು ಎಂದು ಹೇಳಿದರು.

ಶಕ್ತಿ, ಗೃಹಜ್ಯೋತಿ ಹಾಗೂ ಗೃಹಲಕ್ಷ್ಮೀ ಯೋಜನೆಗಳು ಸಂಕಷ್ಟಕ್ಕೆ ಸಿಲುಕಿದ್ದ ಬಡ ಜನರಿಗೆ ಆರ್ಥಿಕ ಚೈತನ್ಯ ತುಂಬುವಲ್ಲಿ ಸಫಲವಾಗಿವೆ ಎಂದರು.

ಗುಣಮಟ್ಟದ ವಿದ್ಯುತ್ ಪೂರೈಕೆಗೆ ತಾಲೂಕಿನಲ್ಲಿರುವ ವಿದ್ಯುತ್ ಸರಬರಾಜು ಕೇಂದ್ರಗಳ ಬಳಿ 120 ಎಕರೆ ಭೂಮಿಯನ್ನು ಖರೀದಿ ಸೋಲಾರ್ ಪಾರ್ಕ್ ನಿರ್ಮಿಸಲಾಗುವುದು ಎಂದು ತಿಳಿಸಿದರು.

ತಹಸೀಲ್ದಾರ್ ಪಟ್ಟರಾಜ ಗೌಡ ಮಾತನಾಡಿ, ಗೃಹಲಕ್ಷ್ಮೀ ಯೋಜನೆಯನ್ನು ಯಶಸ್ವಿಯಾಗಿ ಫಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ತಾಲೂಕು ಆಡಳಿತ ಮಾಡುತ್ತಿದೆ. ನೊಂದಣಿಗೆ ಇರುವ ಸಮಸ್ಯೆಗಳಿಗೆ ಪರಿಹಾರ ದೊರಕಿಸಲಾಗಿದೆ ಎಂದರು.

ಪುರಸಭಾ ಸದಸ್ಯರಾದ ಡಾ.ಸ್ವಾತಿ ಪ್ರದೀಪ್, ಜಾಫರ್ ಸಾಧಿಕ್, ಶಂಕರಪ್ಪ, ನಾಗರಾಜ್, ದೊಡ್ಡಯ್ಯ, ಮುಖ್ಯಾಧಿಕಾರಿ ತಿಮ್ಮರಾಜು, ಬಿಇಒ ಸೈಯದ್ ಮೋಸಿನ್, ಪಿಐ ತಿಮ್ಮಣ್ಣ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net