

ಮೈಸೂರು: ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್ ಎಂ. ವಿಶ್ವೇಶ್ವರಯ್ಯನವರ ಕೊಡುಗೆಗಳ ಬಗ್ಗೆ ಮುಂದಿನ ಪೀಳಿಗೆಗೂ ತಿಳಿಸುವ ಕೆಲಸ ಆಗಬೇಕಿದೆ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಶ್ರೀ ಮರಡಿಲಿಂಗೇಶ್ವರ ಪ್ರಕಾಶನ, ಅಮೃತೇಶ್ವರ ಪ್ರಕಾಶನವು ವಿಜಯನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿವಿಯ ಸಹಾಯಕ ಪ್ರಾಧ್ಯಾಪಕಿ ಡಾ.ಸುಮಿತ್ರಾ ರಾಜಶೇಖರ್ ಅವರ ‘ಮಳವಳ್ಳಿಯ ಇತಿಹಾಸ ಮತ್ತು ಸಂಸ್ಕೃತಿ’, ‘ಸರ್ ಎಂ. ವಿಶ್ವೇಶ್ವರಯ್ಯನವರ ಜೀವನ ಮತ್ತು ಸಾಧನೆಗಳು’ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ಮೈಸೂರನ್ನು ಆಳಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ದಿವಾನರಾಗಿದ್ದ ಮುಖ್ಯ ಇಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯ ಅವರು ನಾಡಿಗೆ ಕನ್ನಂಬಾಡಿ ಕಟ್ಟೆ ನಿರ್ಮಾಣ ಸೇರಿದಂತೆ ಹಲವಾರು ಕೊಡುಗೆಗಳನ್ನು ಕೊಟ್ಟಿದ್ದಾರೆ. ಅವುಗಳ ಬಗ್ಗೆ ಈಗಿನ ಯುವ ಪೀಳಿಗೆಗೂ ತಿಳಿಸುವ ಕೆಲಸ ಆಗಬೇಕು. ನಾಲ್ವಡಿ, ವಿಶ್ವೇಶ್ವರಯ್ಯ ಅವರು ಏನೆಲ್ಲ ಸಾಹಸ, ಸಾಧನೆ ಮಾಡಿದ್ದಾರೆ ಎಂಬುದನ್ನು ತಿಳಿದುಕೊಂಡರೆ ಯುವಪೀಳಿಗೆ ಕೂಡ ಸ್ಫೂರ್ತಿ ಪಡೆದು ಏನಾದರೂ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಮುಕ್ತ ವಿವಿಯ ಕುಲಸಚಿವ ಪ್ರೊ.ಕೆ.ಎಲ್.ಎನ್. ಮೂರ್ತಿ ಮಾತನಾಡಿ, ಪುಸ್ತಕ ಬರೆಯುವವರು, ಓದುವವರು ವಿರಳವಾಗುತ್ತಿದ್ದಾರೆ. ಯುವಕರು ಮೊಬೈಲ್‌ನಲ್ಲಿ ಮುಳುಗಿದ್ದಾರೆ ಎಂದು ವಿಷಾದಿಸಿದರು. ಆದರೆ ಸುಮಿತ್ರಾ ಅವರಂಥವರು ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಸಾಮಾಜಿಕ ವಿಚಾರಗಳು, ವ್ಯಕ್ತಿ ವಿಚಾರಗಳನ್ನು ದಾಖಲಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಮುಂದಿನ ಪೀಳಿಗೆಗೆ ದಾಟಿಸುವ ಕೆಲಸ ಆಗುತ್ತಿದೆ ಎಂದರು. ಇಂದಿನ ಪಿಎಚ್.ಡಿಗಳು ಗುಣಾತ್ಮಕವಾಗಿರುವುದಿಲ್ಲ. ಪ್ರೌಢ ಪ್ರಬಂಧಗಳನ್ನು ಹೊರಗುತ್ತಿಗೆ ನೀಡಿ ಬರೆಸಲಾಗುತ್ತಿದೆ. ಆದರೆ ಇದು ಬದಲಾಗಿ, ಸರಿಯಾದ ರೀತಿಯಲ್ಲಿ ಸಂಶೋಧನೆಗಳು ಆಗಬೇಕು ಎಂದರು.
ಮೈಸೂರು ವಿವಿ ಇತಿಹಾಸ ವಿಭಾಗದ ಅಧ್ಯಕ್ಷ ಪ್ರೊ.ವೈ.ಎಚ್.ನಾಯಕವಾಡಿ ‘ಮಳವಳ್ಳಿಯ ಇತಿಹಾಸ ಮತ್ತು ಸಂಸ್ಕೃತಿ’ ಕೃತಿ ಕುರಿತು ಮಾತನಾಡಿ, ಚಾರಿತ್ರಿಕ, ಸ್ಥಾನಿಕ, ಪ್ರಾದೇಶಿಕ ಕುರಿತು ಸೂಕ್ಷ್ಮ ಅಧ್ಯಯನ ಅಷ್ಟು ಸುಲಭವಲ್ಲ. ಆದರೆ ಡಾ.ಸುಮಿತ್ರಾ ಅವರು ಭೌಗೋಳಿಕ, ಆರ್ಥಿಕ, ಸಾಮಾಜಿಕ, ಧಾರ್ಮಿಕ, ಆಡಳಿತಾತ್ಮಕ ವಿಷಯಗಳನ್ನು ಪರಾಮರ್ಶಿಸಿ, ಶಾಸನಗಳು, ಗಂಗರು, ಚೋಳರು, ಹೊಯ್ಸಳರು, ವಿಜಯನಗರ ಸಾಮ್ರಾಜ್ಯ, ಮೆಸೂರು ಅರಸರು, ಹೆದರಾಲಿ, ಟಿಪ್ಪು ತನಕವೂ ಅಧ್ಯಯನ ಮಾಡಿದ್ದಾರೆ ಎಂದರು.
ಸರ್ ಎಂ. ವಿಶ್ವೇಶ್ವರಯ್ಯನವರ ಜೀವನ ಮತ್ತು ಸಾಧನೆಗಳು ಕೃತಿ ಕುರಿತು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಸರಳ ಇಂಗ್ಲಿಷ್‌ನಲ್ಲಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ವಿಶ್ವೇಶ್ವರಯ್ಯನವರ ಬಾಲ್ಯ, ಆರ್ಥಿಕ ಯೋಜನೆಗಳು, ದಕ್ಷ ಇಂಜಿನಿಯರ್, ಪರಿಣತ ಆಡಳಿತಗಾರ, ಸಾಮಾಜಿಕ ಕಾರ್ಯಕರ್ತ, ವಿಭಿನ್ನ ದೃಷ್ಟಿಕೋನದ ವ್ಯಕ್ತಿಯಾಗಿ ವಿಶ್ವೇಶ್ವರಯ್ಯ ಅವರು ನಾಡಿಗೆ ನೀಡಿರುವ ಕೊಡುಗೆಗಳನ್ನು ದಾಖಲಿಸಿದ್ದಾರೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಪ್ರಧಾನ ಕಾರ್ಯದರ್ಶಿ ಚೀಲೂರು ಚಂದ್ರಶೇಖರ್, ಲೇಖಕಿ ಡಾ.ಸುಮಿತ್ರಾ ರಾಜಶೇಖರ್, ಸಾಹಿತಿ ಮ.ಸಿ. ನಾರಾಯಣ, ಡಿ.ಚಂದ್ರಮ್ಮ, ಕೆ. ಕೆಂಪಯ್ಯ, ಪ್ರಕಾಶಕಿ ಐ.ಎನ್. ತ್ರಿವೇಣಿ ಇದ್ದರು.