

ಕೋಲಾರ: ಒಳ ಮೀಸಲಾತಿ ಸಮೀಕ್ಷೆ ವೇಳೆ ಭೋವಿ ಸಮಾಜದವರು ಜಾತಿ ಹೆಸರು ನಮೂದು ಮಾಡಿಸಲು ಹಿಂಜರಿಯಬೇಡಿ, ಈಗ ಎಚ್ಚರ ತಪ್ಪಿದರೆ ಸೌಲಭ್ಯಗಳಿಂದ ವಂಚನೆಗೆ ಒಳಗಾಗಬೇಕಾಗುತ್ತದೆ ಎಂದು ಚಿತ್ರದುರ್ಗದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಎಚ್ಚರಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗ ಎಚ್ಚರ ತಪ್ಪಿದರೆ ಮುಂದಿನ ದಿನಗಳಲ್ಲಿ ತೊಂದರೆಗೆ ಸಿಲುಕಬೇಕಾಗುತ್ತದೆ, ಆದ್ದರಿಂದ ನಮೂನೆಗಳಲ್ಲಿ ಸ್ಪಷ್ಟವಾಗಿ ಜಾತಿ ಹೆಸರು ಬರೆಸಬೇಕು ಎಂದು ಸಲಹೆ ನೀಡಿದರು.
ಒಳ ಮೀಸಲಾತಿ ವಿಚಾರದಲ್ಲಿ ಮೂರು ದಶಕಗಳಿಂದ ಹೋರಾಟ, ಪರ ವಿರೋಧ ಚರ್ಚೆ ನಡೆಯುತ್ತಲೇ ಇತ್ತು, ಈ ಕುರಿತು ಸುಪ್ರೀಂಕೋರ್ಟ್ನಲ್ಲಿ ಧಾವೆ ಇತ್ತು, ಇದೀಗ ಇತ್ಯರ್ಥಗೊಂಡಿದ್ದು, ಆಯಾ ರಾಜ್ಯಗಳು ಸಿದ್ಧಾಂತ ದತ್ತಾಂಶಗಳಡಿ ಗಣತಿ ನಡೆಸಲು ಸೂಚಿಸಿದ್ದು, ಆದರಂತೆ ನಾಗಮೋಹನ್ದಾಸ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದು, ಮೇ 5ರಿಂದ ಸಮೀೆ ನಡೆಯಲಿದೆ ಎಂದು ತಿಳಿಸಿದರು.
ಜೀವನೋಪಾಯಕ್ಕಾಗಿ ಬೆಂಗಳೂರು, ಮೈಸೂರು, ಬಾಂಬೆ, ಕಾಫಿ ತೋಟಗಳಿಗೆ ಹೋಗಿರುವವರು ಮನೆಗಳಲ್ಲಿದ್ದು ಜಾತಿ ಹೆಸರು ಬರೆಸಬೇಕು. ನಮೂನೆಯ ಅರ್ಜಿಯಲ್ಲಿ 23ರಿಂದ ಜಾತಿ ಕಾಲಂ ಇದ್ದು, ಎಚ್ಚರಿಕೆಯಿಂದ ನಮೂದು ಮಾಡಿಸಬೇಕು. ಕುಲ ಕಸಬನ್ನು ಕಲಂ 63ರಲ್ಲಿ ಬರೆಯಬೇಕು ಎಂದು ಸಲಹೆ ನೀಡಿದರು.
ಸರ್ಕಾರವೇ 80 ಕುಲ ಕಸುಬುಗಳನ್ನು ಗುರುತಿಸಿದೆ. ರಾಜ್ಯದಲ್ಲಿ 11 ಲಕ್ಷಕ್ಕೂ ಹೆಚ್ಚು ಭೋವಿ ಜನಾಂಗವಿದ್ದು, ಎಸ್ಸಿ ಸಮುದಾಯದಲ್ಲಿ ಅತಿ ದೊಡ್ಡ ಜಾತಿಯಾಗಿದೆ ಎಂದು ತಿಳಿಸಿದರು.
ಮುಖಂಡರಾದ ಶ್ರೀಕೃಷ್ಣ, ಗೋಪಾಲ್, ವರದೇನಹಳ್ಳಿ ವೆಂಕಟೇಶ್, ಹರಿಪ್ರಸಾದ್, ವೆಂಕಟೇಶ್, ರಾಮಾಂಜಿನಪ್ಪ, ಶ್ರೀನಾಥ್, ಬಾಬು, ಮಣಿ, ಪ್ರಕಾಶ್, ವಾಸು ಇದ್ದರು.