

ಗಜೇಂದ್ರಗಡ: ಗ್ರಾಹಕರ ಸಹಕಾರ, ಸೊಸೈಟಿ ಸಿಬ್ಬಂದಿಯ ದಕ್ಷ ಆಡಳಿತದಿಂದ ಜಗದಂಬಾ ಕೋ.ಆಪ್ ಸೊಸೈಟಿ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದು, ಪ್ರಸಕ್ತ ವರ್ಷದಲ್ಲಿ 18.63 ಲಕ್ಷ ರೂ. ಲಾಭ ಗಳಿಸಿದೆ ಎಂದು ಸೊಸೈಟಿ ಅಧ್ಯಕ್ಷ ವಿಶ್ವನಾಥಸಾ ಮೇಘರಾಜ ಹೇಳಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ಸೊಸೈಟಿ ಸುವರ್ಣ ಮಹೋತ್ಸವದಲ್ಲಿ ಅವರು ಮಾತನಾಡಿದರು. ಗ್ರಾಹಕರಿಗೆ ಇನ್ನೂ ಹೆಚ್ಚಿನ ಸೇವೆ ಹಾಗೂ ಸೌಲಭ್ಯಗಳನ್ನು ನೀಡಲು ಸಿದ್ದರಿದ್ದೇವೆ. ಗ್ರಾಹಕರು ಪಡೆದ ಸಾಲವನ್ನು ಸಕಾಲದಲ್ಲಿ ಪಾವತಿಸಿ ಸೊಸೈಟಿ ಬೆಳವಣಿಗೆಗೆ ಶ್ರಮಿಸಬೇಕು ಎಂದರು.
ಮಾಜಿ ಸಚಿವ ಕಳಕಪ್ಪ ಬಂಡಿ ಮಾತನಾಡಿ, ವಿಶ್ವನಾಥಸಾ ಮೇಘರಾಜ ಅವರು ಸೊಸೈಟಿ ಅಧ್ಯಕ್ಷರಾದ ಬಳಿಕ ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರೋಣ ತಾಲೂಕು ಸಹಕಾರಿ ಅಭಿವೃದ್ಧಿ ಅಧಿಕಾರಿ ಪ್ರಶಾಂತ ಮುಧೋಳ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಪಡೆಯಲು ಹಲವು ತೊಂದರೆಗಳಿರುತ್ತವೆ. ವ್ಯಾಪಾರಸ್ಥರಿಗೆ ಸುಲಭವಾಗಿ ಸಾಲ ಸಿಗಲು ಹಾಗೂ ಯುವಕರಿಗೆ ಸ್ವ ಉದ್ಯೋಗ ಮಾಡಲು ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಪಡೆಯಲು ಸಹಕಾರ ಸಂಸ್ಥೆಗಳನ್ನು ಬೆಳೆಸಬೇಕು ಎಂದರು.
ಸೊಸೈಟಿ ನಿರ್ದೇಶಕ ಮಾರುತಿ ನಾವಡೆ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಪಟ್ಟಣದ ವೆಂಕೂಸಾ ಭಾಂಡಗೆ ಜಗದಂಬಾ ಸೊಸೈಟಿ ಸ್ಥಾಪನೆ ಜತೆಗೆ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು.
ಜಿಲ್ಲಾ ಸಹಕಾರಿ ಸಂಘದ ಲೆಕ್ಕ ಪರಿಶೋಧನಾ ಇಲಾಖೆ ಅಧಿಕಾರಿ ಅಶೋಕ ಕಟವಟೆ, ಜಿಲ್ಲಾ ಸಹಕಾರ ಸಂಘಗಳ ಸಹಾಯಕ ಉಪ ನಿಬಂಧಕಿ ಪುಷ್ಪಾ ಕಡಿವಾಳ, ಸೊಸೈಟಿ ಉಪಾಧ್ಯಕ್ಷ ಕುಭೇಂದರಸಾ ಭಾಂಡಗೆ, ನಿರ್ದೇಶಕರಾದ ಸುರೇಂದ್ರಸಾ ರಾಯಬಾಗಿ, ಜಿ.ಎಸ್.ಪವಾರ, ಶೇಖರಪ್ಪ ಚನ್ನಿ, ಕೆ.ಎಸ್. ಪವಾರ, ಸಿ.ಎಸ್. ರಾಯಬಾಗಿ, ಆರ್.ಎ. ರಾಯಬಾಗಿ, ವಿ.ಎಸ್. ರಾಯಬಾಗಿ, ಮುಖ್ಯ ಕಾರ್ಯನಿರ್ವಾಹಕ ಭಾಸ್ಕರಸಾ ಶಿಂಗ್ರಿ, ತಿಮ್ಮಣ್ಣ ವನ್ನಾಲ, ಶ್ರೀಧರ ಬಾಕಳೆ, ಆರ್.ಎಂ. ರಾಯಬಾಗಿ, ಎಸ್.ಎನ್. ತಿಮ್ಮನಗೌಡ್ರ, ಎ.ಜಿ. ವಂದಕುದರಿ, ರವಿಂದ್ರಸಾ ಶಿಂಗ್ರಿ ಇತರರು ಇದ್ದರು.