

ಕೊಲ್ಹಾರ: ಭಾರತವನ್ನು 2025ರ ವೇಳೆಗೆ ಕ್ಷಯ ರೋಗ ಮುಕ್ತ ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪಣತೊಟ್ಟಿದ್ದಾರೆ. ಚಿಕಿತ್ಸೆಗೆ ಬಂದ ವ್ಯಕ್ತಿಗಳಲ್ಲಿ ಕ್ಷಯ ರೋಗದ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಅವರಿಗೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಲು ಸೂಚಿಸಬೇಕು ಎಂದು ವಿಜಯಪುರ ಜಿಲ್ಲಾ ಕ್ಷಯ ರೋಗ ಮೇಲ್ವಿಚಾರಕ ಇಮಾಮಸಾಬ ಕಲಬುರ್ಗಿ ಹೇಳಿದರು.
ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕ್ಷಯ ರೋಗ (ಟಿಬಿ) ಕುರಿತು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಖಾಸಗಿ ವೈದ್ಯರಿಗೆ ಕ್ಷಯ ರೋಗ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಕ್ಷಯ ರೋಗದ ಬಗ್ಗೆ ಜಾಗೃತಿ ಮೂಡಿಸಬೇಕು. ಸರಿಯಾದ ರೋಗ ನಿರ್ಣಯ ಮತ್ತು ತ್ವರಿತ ಚಿಕಿತ್ಸೆ ಮಾಡುವುದು ಕ್ಷಯ ರೋಗ ನಿರ್ಮೂಲನೆಗೆ ಪ್ರಮುಖವಾಗಿದೆ ಎಂದರು.
ವೈದ್ಯಾಧಿಕಾರಿ ಲಕ್ಷ್ಮೀ ತೆಲ್ಲೂರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೀರೇಶ ಹಟ್ಟಿ, ಆಯುಷ್ ವೈದ್ಯಾಧಿಕಾರಿ ಎಸ್.ಎಂ.ಪಾಟೀಲ, ಖಾಸಗಿ ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.