

ಕೊಂಡ್ಲಹಳ್ಳಿ: ಮಕ್ಕಳು, ಗರ್ಭಿಣಿ, ಬಾಣಂತಿಯರಲ್ಲಿನ ಅಪೌಷ್ಟಿಕತೆ ಹೋಗಲಾಡಿಸಲು ಪ್ರತಿ ವರ್ಷ ಸೆಪ್ಟೆಂಬರ್ ಮಾಹೆಯಲ್ಲಿ ಪೋಷಣ್ ಅಭಿಯಾನ ಆಯೋಜಿಸಲಾಗುತ್ತದೆ ಎಂದು ಮೊಳಕಾಲ್ಮೂರು ತಾಲೂಕು ಸಿಡಿಪಿಒ ನವೀನ್ ತಿಳಿಸಿದರು.
ಅಪೌಷ್ಟಿಕತೆ, ಮನೆ ಮನೆ ಭೇಟಿ, ಎದೆಹಾಲಿನ ಮಹತ್ವದ ಸ್ತನ್ಯಪಾನ ಸಪ್ತಾಹ, ಅನೇಕ ಕಾರ್ಯಕ್ರಮಗಳನ್ನು ಪೋಷಣ್ ಅಭಿಯಾನದಡಿ ಮಾಡಲಾಗುತ್ತಿದೆ ಎಂದರು.
ಜೀವಕ್ಕೆ ಜೀವ ಕೊಡುವ ಗರ್ಭಿಣಿಯರು ಉತ್ತಮ ಆಹಾರ ಸೇವನೆಯಿಂದ ರಕ್ತಹೀನತೆಯನ್ನು ತಡೆಗಟ್ಟಬಹುದು. ಅಲ್ಲದೆ, ಆರೋಗ್ಯವಂತ ಮಗುವನ್ನು ತಾಯಿ ದೇಶಕ್ಕೆ ನೀಡಲು ಸಾಧ್ಯ. ಇಂದು ಔಷಧಿಗಳಿಂದ ತುಂಬಿದ ಆಹಾರ ಸೇವನೆಯಿಂದ ನಾವು ಆಯುಷ್ಯ ಕಡಿಮೆ ಮಾಡಿಕೊಳ್ಳುತ್ತಿದ್ದೇವೆ ಎಂದರು.
ವೈದ್ಯಾಧಿಕಾರಿ ಡಾ.ಬಿ.ಶಿವಕುಮಾರ್ ಮಾತನಾಡಿ, ಐರನ್,ಕ್ಯಾಲ್ಸಿಯಂ,ವಿಟಮಿನ್ ಮಾತ್ರೆಗಳ ಸೇವನೆಯ ಜೊತೆಗೆ ಪೌಷ್ಟಿಕಾಂಶದ ಆಹಾರಯುಕ್ತ ಸೇವನೆ ಬಹಳ ಮುಖ್ಯ. 18 ವರ್ಷದೊಳಗಿನ ಬಾಲಕಿಯರ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಬೇಕಿದೆ ಎಂದರು.
ಗ್ರಾ.ಪಂ.ಅಧ್ಯಕ್ಷೆ ಎಂ.ಎಲ್.ಪವಿತ್ರಾ ಕಾಯಕ್ರಮ ಉದ್ಘಾಟಿಸಿದರು. ಗ್ರಾ.ಪಂ. ಉಪಾಧ್ಯಕ್ಷ ಕೆ.ಎಂ.ತಿಪ್ಪೇಸ್ವಾಮಿ, ಸದಸ್ಯ ಎಸ್‌ಕೆ ನಿಂಗರಾಜ್, ಮುಖ್ಯ ಶಿಕ್ಷಕ ಸಿ.ಚಂದ್ರಶೇಖರ್, ವಲಯ ಮೇಲ್ವಿಚಾರಕಿ ಫಿರ್‌ದೌಸ್,ಮುಖಂಡರಾದ ಕೆ.ಎ.ಟೀಕೇಶ್ವರಪ್ಪ,ಹೋ.ಚಿ.ಬೋರಣ್ಣ,ಗ್ರಾ.ಪಂ.ಎಸ್‌ಡಿಎ ಕವಿತಾ,ಕೊಂಡ್ಲಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಕೊಂಡ್ಲಹಳ್ಳಿ, ಮಾರಮ್ಮನಹಳ್ಳಿ, ಇಸ್ಲಾಂಪುರ ಗ್ರಾಮಗಳ ಅಂಗನವಾಡಿ, ಆಶಾಕಾರ್ಯಕರ್ತೆಯರು ಇತರರಿದ್ದರು.