

ಮೈಸೂರು: ವಿದೇಶಗಳಲ್ಲಿ ವಿದ್ಯಾಭ್ಯಾಸ ಮುಗಿಸಿದ ವಿದ್ಯಾರ್ಥಿಗಳು ತಮ್ಮ ಮೂಲ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ಉಪಾಧ್ಯಕ್ಷ ಪ್ರೊ.ಎಸ್.ಆರ್.ನಿರಂಜನ ಹೇಳಿದರು.
ನಗರದ ಊಟಿ ರಸ್ತೆಯ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಪ್ರವೇಶ ಕಾರ್ಯಕ್ರಮವಾದ ‘ದೀಕ್ಷಾರಂಭ’ವನ್ನು ಉದ್ಘಾಟಿಸಿ ಮಾತನಾಡಿದರು.
ಬಹುಶಾಸ್ತ್ರೀಯ ಜ್ಞಾನ ಮತ್ತು ಅಭಿವೃದ್ಧಿ ಪೂರಕ ವ್ಯಕ್ತಿತ್ವವನ್ನು ರೂಢಿಸಿಕೊಳ್ಳುವುದರಿಂದ ಯುವ ಸಮುದಾಯಕ್ಕೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಮೃದ್ಧ ಅವಕಾಶಗಳು ಲಭಿಸಲಿದೆ. ಜತೆಗೆ, ಶಿಕ್ಷಕರ ಜವಾಬ್ದಾರಿಯು ಬಹಳ ಮುಖ್ಯವಾದುದು ಎಂದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಆರ್.ಮೂಗೇಶಪ್ಪ ಮಾತನಾಡಿ, ಶಿಸ್ತುಬದ್ಧ ಶಿಕ್ಷಣ ಮತ್ತು ಗುರಿ ಕೇಂದ್ರೀಕೃತ ಸಾಧನೆ ಯಶಸ್ಸಿನ ಗುಟ್ಟು ಎಂದು ಹೇಳಿದರು.
ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ, ಪ್ರಾಂಶುಪಾಲೆ ಡಾ.ಎಸ್.ಪ್ರತಿಭಾ, ಸಂಚಾಲಕಿ ಡಾ.ಕುಮುದಿನಿ ಅಚ್ಚಿ, ಡಾ.ಎನ್.ರಾಜೇಂದ್ರಪ್ರಸಾದ್ ಮತ್ತಿತರರಿದ್ದರು.