ಕ್ಷಯರೋಗ ಪತ್ತೆಗೆ ಸಹಕರಿಸಿ : ಡಿಎಚ್‌ಒ ಜನಾರ್ದನ್ ಸಲಹೆ

DHO (1) (1)
Published on

ಬಳ್ಳಾರಿ : ಕಫ ಲಕ್ಷಣವಿರುವ ಯಾರಿಗಾದರೂ ಪರೀಕ್ಷೆಗೆ ಸೂಚಿಸಿದಲ್ಲಿ ತಪ್ಪದೆ ಪರೀಕ್ಷೆ ಮಾಡಿಸುವ ಮೂಲಕ ಕ್ಷಯರೋಗ ನಿರ್ಮೂಲನೆಗೆ ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಲ್.ಜನಾರ್ದನ್ ಅವರು ತಿಳಿಸಿದರು.

ನಗರದ ಬಂಡಿಹಟ್ಟಿ, ಆಶ್ರಯ ಕಾಲನಿ, ಕವಾಡಿ ಸ್ಟ್ರೀಟ್‌ಗಳಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಆರಂಭವಾದ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನದಡಿ ಕ್ಷಯರೋಗ ಪತ್ತೆ ಹಚ್ಚುವ ಕುರಿತು ಸೋಮವಾರ ಆರೋಗ್ಯ ಸಿಬ್ಬಂದಿ ತಂಡ ಕೈಗೊಂಡಿದ್ದ ಮನೆ ಭೇಟಿ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲಾಮಟ್ಟದಲ್ಲಿ ಆರೋಗ್ಯ ತಂಡವು ಮನೆ-ಮನೆಗಳಿಗೆ ಭೇಟಿ ನೀಡಲಿದೆ. ಸಾರ್ವಜನಿಕರು ಸಹಕಾರ ನೀಡಬೇಕು. ಕೆಮ್ಮು, ಜ್ವರ, ಮೈ ಬೆವರುವುದು, ಕಮ್ಮಿದಾಗ ಕಫದಲ್ಲಿ ರಕ್ತ ಬೀಳುವುದು, ಹಸಿವಾಗದಿರುವುದು, ಕಾರಣವಿಲ್ಲದೆ ತೂಕ ಕಡಿಮೆಯಾಗುವುದು, ಎದೆ ನೋವು ಕಂಡುಬಂದಲ್ಲಿ ಕಫ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಈಗಾಗಲೇ ತಮ್ಮ ಕುಟುಂಬದಲ್ಲಿ ಯಾರಾದರೂ ಕ್ಷಯರೋಗದ ಚಿಕಿತ್ಸೆ ಪಡೆಯುತ್ತಿದ್ದರೆ ದಯವಿಟ್ಟು ಕಫ ಪರೀಕ್ಷೆ ಮಾಡಿಸಬೇಕು ಮತ್ತು ಮರುದಿನ ಬೆಳಗ್ಗೆ ಪುನಃ ಕಫ ಸಂಗ್ರಹಿಸಿ ತಂಡಕ್ಕೆ ನೀಡಬೇಕು. ಒಂದು ವೇಳೆ ಕಫ ಪರೀಕ್ಷೆ ಫಲಿತಾಂಶ ನೆಗೆಟಿವ್ ಎಂದು ಬಂದರೆ ಎಕ್ಸ್-ರೇ ಪರೀಕ್ಷೆಯನ್ನು ಉಚಿತವಾಗಿ ಮಾಡಲಾಗುವುದು. ಇದರಿಂದ ಸಮಗ್ರವಾಗಿ ರೋಗ ಪತ್ತೆಗೆ ಸಹಕಾರಿಯಾಗುವುದು ಎಂದರು.

ಒಂದು ವೇಳೆ ರೋಗವು ಖಚಿತಪಟ್ಟಲ್ಲಿ ಆರು ತಿಂಗಳು ಉಚಿತ ಚಿಕಿತ್ಸೆ ನೀಡುವುದರ ಜತೆಗೆ 500 ರೂ. ಗಳನ್ನು ಚಿಕಿತ್ಸೆ ಅವಧಿಯಲ್ಲಿ ರೋಗಿಯ ಬ್ಯಾಂಕ್ ಖಾತೆಗೆ ನೇರ ಜಮಾ ಮಾಡಲಾಗುವುದು. ಒಮ್ಮೆ ಚಿಕಿತ್ಸೆ ಆರಂಭಿಸಿದ ನಂತರ ಮಧ್ಯದಲ್ಲಿ ಚಿಕಿತ್ಸೆ ನಿಲ್ಲಿಸಬಾರದು ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ 1,231 ಜನ ಚಿಕಿತ್ಸೆ ಪಡೆಯುತ್ತಿದ್ದು ನಿಕ್ಷಯಮಿತ್ರ ಯೋಜನೆಯಡಿ 41 ದಾನಿಗಳಿಂದ 1,223 ಪೌಷ್ಟಿಕ ಆಹಾರ ಕಿಟ್ ಪೂರಕವಾಗಿ ವಿತರಿಸಲಾಗಿದೆ ಎಂದು ಹೇಳಿದರು.

ವೈದ್ಯಾಧಿಕಾರಿಗಳಾದ ಡಾ.ಯಾಸ್ಮೀನ್.ಎಸ್, ಡಾ.ಕಾಶಿಪ್ರಸಾದ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್.ದಾಸಪ್ಪನವರ, ಸಿಬ್ಬಂದಿಗಳಾದ ದಾನಕುಮಾರಿ, ಪಾರ್ವತಿ, ಪ್ರದೀಪ್, ಮಹಾಲಿಂಗ, ಸಾವಿತ್ರಿ, ಕಲಾವತಿ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net