

ನರಸಾಪುರ: ರಸ್ತೆ ವಿಸ್ತರಣೆಗೆ ಎಲ್ಲರೂ ಸಹಕರಿಸಬೇಕು ಎಂದು ಕೋಲಾರ ಶಾಸಕ ಕೊತ್ತೂರು ಜಿ. ಮಂಜುನಾಥ್ ಮನವಿ ಮಾಡಿದರು.
ನರಸಾಪುರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನರಸಾಪುರದ ಮುಖ್ಯ ರಸ್ತೆಯ ವಿಸ್ತರಣೆಗೆ ಸಂಬಂಧಿಸಿದಂತೆ ಹಮ್ಮಿಕೊಂಡಿದ್ದ ಕುಂದುಕೊರತೆ ಸಭೆಯಲ್ಲಿ ಮಾತನಾಡಿ, ಅರಣ್ಯ ಇಲಾಖೆಯವರು ರಸ್ತೆಯ ಪಕ್ಕದಲ್ಲಿದ್ದ ಮರಗಳನ್ನು ಕಡಿಯುವುದಕ್ಕೆ ಅನುಮತಿ ನೀಡಲು ವಿಳಂಬವಾದ ಕಾರಣ ರಸ್ತೆ ವಿಸ್ತರಣೆಯು ತಡವಾಗಿದೆ. ಈಗ ಮರಗಳನ್ನು ಕಡಿದಾಗಿದೆ. ಕೆಲವೇ ದಿನಗಳಲ್ಲಿ ಕೆಲಸ ಪ್ರಾರಂಭವಾಗುತ್ತದೆ. ಹೆದ್ದಾರಿ ಪ್ರಾಧಿಕಾರದಿಂದ ಪಟ್ಟಿ ತರಿಸಿಕೊಂಡಿದ್ದು ಅದರಲ್ಲಿನ ನಿಯಮದಂತೆ ವಿಸ್ತರನೆ ಮಾಡಲಾಗುತ್ತದೆ ಎಂದರು.
ರಸ್ತೆ ವಿಸ್ತರಣೆ ಸ್ಥಳಕ್ಕೆ ಸಂಬಂಧಿಸಿದಂತೆ ನಮ್ಮ ಮುಖಂಡರು ಬಂದು ಮನವಿ ಮಾಡಿಕೊಂಡರೂ ಸಹ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಹೆದ್ದಾರಿಗೆ ಸಂಬಂಧಿಸಿದ ಜಾಗದಲ್ಲಿ ಖಾತೆ ಮಾಡಿಕೊಂಡು ಕಟ್ಟಡ ನಿಮಾರ್ಣ ಮಾಡಿದ್ದರೂ ಸಹ ಹೆದ್ದಾರಿಗೆ ಬರಬೇಕಾದ ಸ್ಥಳವನ್ನು ತೆರವುಗೊಳಿಸಲಾಗುತ್ತದೆ. ಕಾನೂನು ಪ್ರಕಾರ ಮತ್ತು ಕ್ರಿಯಾಯೋಜನೆ ಅನುಸಾರ ಎಷ್ಟು ಅಗಲೀಕರಣ ಮಾಡಬೇಕಾಗುತ್ತದೆಯೋ ಅಷ್ಟನ್ನು ಸಂಪೂರ್ಣವಾಗಿ ಮಾಡಲಾಗುತ್ತದೆ ಎಂದರು.
ಇದೇ ವೇಳೆ ಸ್ಥಳದಲ್ಲಿದ್ದ ಬೆಸ್ಕಾಂ ಅಧಿಕಾರಿಗಳಿಗೆ ವಿದ್ಯುತ್ ಕಂಬ ಮತ್ತು ತಂತಿಗಳನ್ನು ಎಳೆಯುವ ಕಾರ್ಯ ಬೇಗನೆ ಪೂರ್ಣಗೊಳಿಸಬೇಕು. ಹಾಗೆಯೇ ಪೊಲೀಸ್ ಅಧಿಕಾರಿಗಳೂ ಸಹ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಸಹಕರಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಪಿಡಿಒ ಮುನಿರಾಜು, ವೇಮಗಲ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಂಜು, ಬೆಸ್ಕಾಂನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಬಸವರಾಜ್, ನರಸಾಪುರ ಗ್ರಾಪಂ ಮಾಜಿ ಸದಸ್ಯರಾದ ಸೈಯದ್ ಪಾಷಾ, ನೌಶಾದ್ ಖಾನ್, ಮುಖಂಡರಾದ ಊರಟ ಅಗ್ರಹಾರ ಚೌಡರೆಡ್ಡಿ, ಪೈಲ್ವಾನ್ ಆಂಜಿನಪ್ಪ, ಚಂದ್ರಮೋಹನ್, ವಸಿಮ್, ಜಾಲಿ ಮಂಜು, ಬಾನು, ರಾಮಸಂದ್ರ ಕುಮಾರ್, ನಾಗಲಾಪುರ ಪಾಟೀಲ್, ಬೆಟ್ಟ ಹೊಸಪುರ ಜಗನ್ ಇತರರು ಇದ್ದರು.