

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಬ್ರಾಹ್ಮಣರ ಶ್ರೇಯೋಭಿವೃದ್ಧಿ ಹಾಗೂ ಹಿತಾಸಕ್ತಿ ಕಾಪಾಡಲು ಕೇಶ್ವಾಪುರ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘವು ವಿವಿಧ ರಚನಾತ್ಮಕ ಚಟುವಟಿಕೆಗಳನ್ನು ಕೈಗೊಂಡಿದೆ. ಸಮಾಜೋನ್ನತಿಯ ಚಟುವಟಿಕೆಗಳಿಗೆ ಸಮುದಾಯದವರು ಸಹಕಾರ ನೀಡಬೇಕು ಎಂದು ಸಂಘದ ಅಧ್ಯಕ್ಷ ಸುನಿಲ ಗುಮಾಸ್ತೆ ಹೇಳಿದರು.
ಸಂಘದ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾಜದ ಗಣ್ಯರು ಹಾಗೂ ಜನಪ್ರತಿನಿಧಿಗಳ ನೆರವಿನಿಂದ ಕಟ್ಟಡ ವಿಸ್ತರಣಾ ಕಾಮಗಾರಿ ನಡೆಯುತ್ತಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಆರ್ಥಿಕ ನೆರವು, ರಕ್ತದಾನ, ಉಚಿತ ಆರೋಗ್ಯ ಶಿಬಿರ, ಸಂಕಷ್ಟದಲ್ಲಿರುವವರಿಗೆ ನೆರವು ನೀಡುವಂತಹ ಚಟುವಟಿಕೆಗಳಿಗೆ ನಡೆಸಲಾಗುತ್ತಿದೆ ಎಂದರು.
ಕಾರ್ಯದರ್ಶಿ ಪ್ರಹ್ಲಾದ ಪರ್ವತಿ 2023-24ನೇ ಸಾಲಿನ ವಾರ್ಷಿಕ ವರದಿ ಮಂಡಿಸಿ, ಒಪ್ಪಿಗೆ ಪಡೆದರು. ಕಾರ್ಯನಿರ್ವಾಹಕ ಸದಸ್ಯ ವೆಂಕಟೇಶ ದಿವಾಣಜಿ ಕಳೆದ ವರ್ಷದ ವರದಿ ವಾಚಿಸಿ, ಅನುಮೋದನೆ ಪಡೆದರು. ಕಾರ್ಯನಿರ್ವಾಹಕ ಸದಸ್ಯ ಮನೋಜ ಪರ್ವತೀಕರ ಸಭೆಗೆ ಮಂಡಿಸಿದ ಕಳೆದ ವರ್ಷದ ಆಯವ್ಯಯ ಹಾಗೂ ಪ್ರಸಕ್ತ ಸಾಲಿನ ಅಂದಾಜು ಆಯವ್ಯಯ ಪತ್ರಿಕೆಯನ್ನು ಅಂಗೀಕರಿಸಲಾಯಿತು.
ಸಂಘದ ಸಲಹಾ ಮಂಡಳಿ ಸದಸ್ಯ ಡಾ. ವಿ.ಜಿ.ನಾಡಗೌಡ ಮಾತನಾಡಿದರು. ಪ್ರಕಾಶ ಅನಿಗೋಳ, ಜಿ.ಎಸ್.ಕುಲಕರ್ಣಿ, ಕಮಲಾ ನಾಡಗೇರ, ಎನ್.ಎಂ.ಕುಲಕರ್ಣಿ ಸಲಹೆ ಸೂಚನೆ ನೀಡಿದರು. ಉಪಾಧ್ಯಕ್ಷ ರಾಘವೇಂದ್ರ ಗುಡಿ, ಸಹ ಕಾರ್ಯದರ್ಶಿ ಮನೋಹರ ಪರ್ವತಿ, ಕಾರ್ಯಕಾರಿಣಿ ಸದಸ್ಯ ಪ್ರದೀಪ ಜೋಶಿ, ಮಹಿಳಾ ಮಂಡಳದ ಅಧ್ಯಕ್ಷೆ ಸರಸ್ವತಿ ಗುಡಿ ಇದ್ದರು. ಅಶ್ವಿನಿ ಜೋಶಿ ಪ್ರಾರ್ಥಿಸಿದರು. ಕೃಷ್ಣ ಕುಲಕರ್ಣಿ ಸ್ವಾಗತಿಸಿದರು. ಧೀರೇಂದ್ರ ಬಾಗಲಕೋಟೆ ವಂದಿಸಿದರು. ಭೀಮಾಜಿ ಕುಲಕರ್ಣಿ ನಿರೂಪಿಸಿದರು.