ನ್ಯಾಯಸಮ್ಮತ ಚುನಾವಣೆಗೆ ಸಹಕರಿಸಿ : ಜಿಲ್ಲಾಧಿಕಾರಿ ಡಾ.ರಾಜೇಂದ್ರ

11
Published on

ಮೈಸೂರು: ಮುಂಬರುವ ಸಾರ್ವತ್ರಿಕ ವಿಧಾನಸಭೆ ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಲು ಜಿಲ್ಲಾಡಳಿತಕ್ಕೆ ಎಲ್ಲ ಪಕ್ಷಗಳು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮನವಿ ಮಾಡಿದರು.


ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡಿದರು. ಬ್ಯಾಂಕ್ ಖಾತೆಗಳಲ್ಲಿ ಅನುಮಾನಾಸ್ಪದವಾಗಿ ಹೆಚ್ಚು ಮೊತ್ತದ ಹಣದ ವರ್ಗಾವಣೆ, ಒಂದೇ ಖಾತೆಯಿಂದ ಹೆಚ್ಚು ಖಾತೆಗಳಿಗೆ ಹಣ ವರ್ಗಾವಣೆ, ಖಾತೆಯಿಂದ ದೊಡ್ಡ ಮೊತ್ತದ ನಗದು ಹಣವನ್ನು ತೆಗೆಯುವುದು ಕಂಡುಬಂದಲ್ಲಿ ನಿಗಾವಹಿಸಿ ವರದಿ ನೀಡುವಂತೆ ಬ್ಯಾಂಕ್ ಮೇನೇಜರ್‌ಗಳಿಗೆ ತಿಳಿಸಲಾಗಿದೆ ಎಂದರು.

ಚುನಾವಣಾ ವೇಳಾಪಟ್ಟಿ ಪ್ರಕಟವಾದ ದಿನಾಂಕದಿಂದ ಮಾದರಿ ನೀತಿ ಸಂಹಿತೆ ಜಾರಿಗೆ ಬರುತ್ತದೆ. ಮಾದರಿ ನೀತಿ ಸಂಹಿತೆ ಜಾರಿಗೂ ಮುನ್ನವೇ ಸಂಭಾವ್ಯ ಅಭ್ಯರ್ಥಿಗಳು, ರಾಜಕೀಯ ಪಕ್ಷ ಹಾಗೂ ಇನ್ನಿತರ ಮೂಲಗಳಿಂದ ಮತದಾರರಿಗೆ ಹಣದ ಆಮಿಷ ಒಡ್ಡುವುದು, ವಿವಿಧ ವಸ್ತುಗಳನ್ನು ಹಂಚಿಕೆ ಮಾಡುವುದು ಕಂಡುಬಂದಲ್ಲಿ ದಾಳಿ ನಡೆಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಚುನಾವಣಾ ಆಯೋಗ ನೀಡುವ ಸೂಚನೆಗಳನ್ನು ಪಾಲಿಸಬೇಕು. ಈಗಿನಿಂದಲೇ ಚುನಾವಣೆಗೆ ಸಂಬಂಧಿಸಿದಂತೆ ಇರುವ ನಿಯಮ ಹಾಗೂ ಕಾಯ್ದೆಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

ಖಾಸಗಿ ಮನೆ, ಗೋಡೆ ಹಾಗೂ ರಸ್ತೆ ಬದಿ, ಸ್ಧಳೀಯ ಸಂಸ್ಧೆಗಳ ಕಟ್ಟಡ ಇತ್ಯಾದಿಗಳಲ್ಲಿ ರಾಜಕೀಯ ಪಕ್ಷದ ವಿಷಯಗಳ ಕುರಿತ ಗೋಡೆ ಬರಹ, ಪೋಸ್ಟರ್ಸ್‌ಗಳು, ಬ್ಯಾನರ್, ಕಟೌಟ್‌ಗಳನ್ನು ಹಾಕಲಾಗಿದೆ. ಅವುಗಳನ್ನು ಇಂದಿನಿಂದ ತೆರವುಗೊಳಿಸಲು ಸೂಚನೆ ನೀಡಲಾಗಿದೆ ಎಂದರು.
ರಾಜಕೀಯ ಪಕ್ಷಗಳ ವಿಚಾರ ಸಂಬಂಧ ಫ್ಲೆಕ್ಸ್ ಅಳವಡಿಸಲು ಅಧಿಕೃತವಾಗಿ ಸ್ಧಳೀಯ ಸಂಸ್ಧೆಗಳಿಂದ ಹಾಗೂ ನಗರ ವ್ಯಾಪ್ತಿಯಲ್ಲಿ ಮಹಾನಗರ ಪಾಲಿಕೆಯಿಂದ ಅನುಮತಿ ಪಡೆಯುವುದು ಕಡ್ಡಾಯ. ಅನುಮತಿ ಪಡೆಯದ ಗೋಡೆ ಬರಹ, ಫ್ಲೆಕ್ಸ್ ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.

ಮಾದರಿ ನೀತಿ ಸಂಹಿತೆ ಜಾರಿಗೂ ಮನ್ನ ರಾಜಕೀಯ ಪಕ್ಷದವರು ಬೈಕ್ ರ‌್ಯಾಲಿ ಮಾಡುವುದಕ್ಕೆ, ರಾಜಕೀಯ ಪಕ್ಷಗಳ ಸಭೆ ಸಮಾರಂಭ ಆಯೋಜಿಸುವುದಕ್ಕೆ ಅನುಮತಿ ಪಡೆಯಬೇಕು ಎಂದರು.

ರಾಜಕೀಯ ಸಮಾರಂಭಗಳ ಪೆಂಡಾಲ್, ಧ್ವನಿವರ್ಧಕ ಬಳಸುವ ಮುನ್ನ ನಿಯಾಮನುಸಾರ ಅನುಮತಿ ಪಡೆಯಬೇಕು. ಇಲ್ಲದಿದ್ದರೆ ಕ್ರಮ ಕೊಳ್ಳಲಾಗುವುದು ಎಂದು ಡಾ. ರಾಜೇಂದ್ರ ತಿಳಿಸಿದರು.
ಮಹಾನಗರ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಾಯತ್ರಿ ಹಾಗೂ ವಿವಿಧ ರಾಜಕೀಯ ಪಕ್ಷದ ಮುಖಂಡರುಗಳು ಉಪಸ್ಧಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net