ಕಾದು ನೋಡುವ ತಂತ್ರಕ್ಕೆ ಮೊರೆ ಹೋದ ಗುತ್ತಿಗೆದಾರರು:24ಕ್ಕೆ ಕಾರ್ಯಕಾರಿ ಸಮಿತಿ ಸಭೆ

contractors
Published on

ಬೆಂಗಳೂರು: ಬಾಕಿ ಉಳಿದ ಅಂದಾಜು 30 ಸಾವಿರ ಕೋಟಿ ರೂ.ಗಿಂತ ಅಧಿಕ ಕಾಮಗಾರಿಗಳ ಬಿಲ್​ಗಳಿಗೆ ಹಣ ಪಾವತಿ ಕುರಿತು ಸರ್ಕಾರಕ್ಕೆ ನೀಡಿದ್ದ ಗಡುವು ಮುಗಿದು 4 ದಿನ ಕಳೆದ ಬಳಿಕ ರಾಜ್ಯ ಗುತ್ತಿಗೆದಾರರ ಸಂಘ, ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ.

ಚಾಮರಾಜಪೇಟೆ 5ನೇ ಮುಖ್ಯ ರಸ್ತೆಯಲ್ಲಿರುವ ಗುತ್ತಿಗೆದಾರರ ಕೇಂದ್ರ ಕಚೇರಿಯಲ್ಲಿ ಶುಕ್ರವಾರ (ಜ.24) ಬೆಳಗ್ಗೆ 11 ಗಂಟೆಗೆ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಬಿಲ್​ಗಳಿಗೆ ಹಣ ಬಿಡುಗಡೆ ಮಾಡುವಂತೆ ಸರ್ಕಾರದ ಮೇಲೆ ಇನ್ನಷ್ಟು ಒತ್ತಡ ತರುವುದು ಹಾಗೂ ಮುಂದಿನ ಹೋರಾಟದ ಕುರಿತು ಗುತ್ತಿಗೆದಾರರು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.

ಜಲಸಂಪನ್ಮೂಲ ಇಲಾಖೆ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್​, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್​ ಇಲಾಖೆ ಸಚಿವ ಪ್ರಿಯಾಂಕ್​ ಖರ್ಗೆ, ವಸತಿ ಸಚಿವ ಜಮೀರ್​ ಅಹ್ಮದ್​, ಸಣ್ಣ ನೀರಾವರಿ ಸಚಿವ ಎನ್​.ಎಸ್​.ಬೋಸರಾಜು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್​ ಗುಂಡೂರಾವ್​, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್​.ಸಿ.ಮಹದೇವಪ್ಪ ಮತ್ತು ಪೌರಾಡಳಿತ ಸಚಿವ ರಹೀಂಖಾನ್​ ಅವರಿಗೆ ಜ.9ರಂದು ಸಂಘ ಪತ್ರ ಬರೆದಿತ್ತು. ಈ ಪತ್ರ ತಲುಪಿದ 7 ದಿನದೊಳಗೆ ಗುತ್ತಿಗೆದಾರರ ಕುಂದುಕೊರತೆಗಳ ಬಗ್ಗೆ ತಮ್ಮ ಸಮ್ಮುಖದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಲು ಸಭೆ ಕರೆಯಬೇಕೆಂದು 7 ಸಚಿವರಿಗೆ ಗಡುವು ಕೊಟ್ಟಿತ್ತು. ಜ.17ರಂದೇ ಗಡುವು ಮುಗಿದಿದೆ.

ಸ್ಪಂದಿಸದ 5 ಸಚಿವರು: ಪ್ರಿಯಾಂಕ್​ ಖರ್ಗೆ ಮತ್ತು ಎನ್​.ಎಸ್​.ಬೋಸರಾಜು ಮಾತ್ರ ಗುತ್ತಿಗೆದಾರರ ಜತೆ ಸಭೆ ನಡೆಸಲು ಸಮ್ಮತಿಸಿದ್ದಾರೆ. ಗುರುವಾರ (ಜ.23) ಸಂಜೆ 4ಕ್ಕೆ ಬೋಸರಾಜು, ಗುತ್ತಿಗೆದಾರರ ಜತೆ ಸಭೆ ನಡೆಸಲು ಸಮಯ ನಿಗದಿಯಾಗಿದೆ. ಸಭೆ ನಡೆಸಲು ಪ್ರಿಯಾಂಕ್​ ಖರ್ಗೆ ಸಮಯ ನಿಗದಿಪಡಿಸಿಲ್ಲ. ಮುಂದಿನ ಮುರ್ನಾಲ್ಕು ದಿನದೊಳಗೆ ಡಿಸಿಎಂ ಡಿಕೆಶಿ, ಜಮೀರ್​ ಅಹ್ಮದ್​, ದಿನೇಶ್​ ಗುಂಡೂರಾವ್​, ಎಚ್​. ಸಿ. ಮಹದೇವಪ್ಪ ಮತ್ತು ರಹೀಂಖಾನ್​ ನಮ್ಮ ಪತ್ರಕ್ಕೆ ಸ್ಪಂದಿಸುವ ಅಚಲ ವಿಶ್ವಾಸ ಇದೆ. ಅದಕ್ಕಾಗಿ ಇನ್ನಷ್ಟು ಕಾಲಾವಕಾಶ ನೀಡಲಾಗುವುದು ಎಂದು ಸಂಘದ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net