ಬಿಲ್ ಪಾವತಿಗೆ ಗುತ್ತಿಗೆದಾರರ ಮನವಿ

Controcter asosiyetion
Published on

ಕಾರವಾರ: ನಗರಸಭೆಯಿಂದ ಕೈಗೊಳ್ಳಲಾದ ಕಾಮಗಾರಿಗಳ ಬಿಲ್‌ ಗಳನ್ನು ಶೀಘ್ರ ಗುತ್ತಿಗೆದಾರರಿಗೆ ಪಾವತಿಸುವಂತೆ ಕಾರವಾರ ತಾಲೂಕು ನೋಂದಾಯಿತ ಸಿವಿಲ್ ಗುತ್ತಿಗೆದಾರರು ಪೌರಾಯುಕ್ತರನ್ನ ಭೇಟಿಯಾಗಿ ಒತ್ತಾಯಿಸಿದರು.

ನಗರಸಭೆಯ ವ್ಯಾಪ್ತಿಯಲ್ಲಿ 10 ಕೋಟಿ ರೂ.ಗೂ ಅಧಿಕ ಕಾಮಗಾರಿಗಳಾಗಿವೆ. ಆದರೆ, ನಗರಸಭೆಯಲ್ಲಿ ಹಣವಿಲ್ಲದೆ ಗುತ್ತಿಗೆದಾರರಿಗೆ ಬಿಲ್ ಪಾವತಿಸಿಲ್ಲ.

ಹತ್ತಾರು ವರ್ಷಗಳ ಬಿಲ್ ಕೂಡ ಹಾಗೇ ಬಾಕಿ ಇದೆ. 2011ರಲ್ಲಿ ಗುತ್ತಿಗೆದಾರರೊಬ್ಬರು ಒಟ್ಟು 33 ಲಕ್ಷ ರೂ.ಗಳ ಕಾಮಗಾರಿ ಮಾಡಿದ್ದರು. ಆದರೆ, ಅವರಿಗೆ ಈವರೆಗೂ ನಗರಸಭೆಯಿಂದ ಬಿಲ್ ಪಾವತಿಸಿಲ್ಲ ಎಂದು ಗುತ್ತಿಗೆದಾರರ ಸಂಘದ ಸದಸ್ಯರು ತಮ್ಮ ಅಳಲು ತೋಡಿಕೊಂಡರು.


ಗುತ್ತಿಗೆದಾರರು ನಗರಸಭೆಯೊಂದಿಗೆ ಬಿಲ್ ಪಾವತಿಗಾಗಿ ಪತ್ರ ವ್ಯವಹಾರ ಮಾಡಿದ್ದಾರೆ.

ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡಿ ಹಿರಿತನದ ಆಧಾರದ ಮೇಲೆ ಬಿಲ್ ಪಾವತಿಸಲು ಠರಾವಾಗಿದೆ.

ಆದರೆ, 12 ವರ್ಷಗಳಿಂದ 33 ಲಕ್ಷ ರೂ. ಬಾಕಿ ಇರುವ ಗುತ್ತಿಗೆದಾರನಿಗೆ ಬಿಲ್ ಪಾವತಿಸದೆ ಅವರ ನಂತರದವರಿಗೆಲ್ಲ ಪಾವತಿ ಆಗಿದೆ.

ಇದು ಸರಿಯಾದ ಕ್ರಮವಲ್ಲ ಎಂದು ತಾಲೂಕು ಅಧ್ಯಕ್ಷ ಮಾಧವ ನಾಯಕ ಹೇಳಿದರು.
ಸಾಕಷ್ಟು ಸಾಲ ಮಾಡಿಕೊಂಡು ಕಾಮಗಾರಿಗಳನ್ನು ಮಾಡಿದ್ದು, ಅಂಥವರಿಗೆ ಬಿಲ್ ಪಾವತಿಯಾಗದ ಕಾರಣ ಗುತ್ತಿಗೆದಾರರು ಬೀದಿಗೆ ಬರುವಂತಾಗಿದೆ.

ಶೀಘ್ರ ಬಿಲ್ ಪಾವತಿ ಮಾಡಬೇಕು ಎಂದು ಒತ್ತಾಯಿಸಿದರು.
ಪೌರಾಯುಕ್ತ ಉದಯ ಶೆಟ್ಟಿ ಪ್ರತಿಕ್ರಿಯಿಸಿ, "ನಾನು ಇತ್ತೀಚಿಗಷ್ಟೆ ಜವಾಬ್ದಾರಿ ವಹಿಸಿಕೊಂಡಿದ್ದು, ಹಿಂದಿನ ಬಾಕಿ ಬಿಲ್‌ಗಳ ಬಗ್ಗೆ ಮಾಹಿತಿ ಇಲ್ಲ.

ಯಾವುದೇ ಹೊಸ ಕಾಮಗಾರಿಗಳನ್ನ ಈಗ ನಗರಸಭೆಯಿಂದ ಮಾಡಿಸುತ್ತಿಲ್ಲ.

ಸಾಕಷ್ಟು ತೆರಿಗೆಗಳು ನಗರಸಭೆಗೆ ಬರುವುದಿದ್ದು, ಗುತ್ತಿಗೆದಾರರ ಬಾಕಿ ಬಿಲ್ ಪಾವತಿಗೆ ಸ್ವಲ್ಪ ಕಾಲಾವಕಾಶ ಬೇಕು. ಎಲ್ಲರದ್ದೂ ಬಿಲ್ ಪಾವತಿಯಾಗಲಿದೆ" ಎಂದು ಭರವಸೆ ನೀಡಿದರು.

ಗುತ್ತಿಗೆದಾರರಾದ ಡಿ.ಕೆ.ನಾಯ್ಕ, ಅನೀಲ್ ಮಾಳ್ಸೇಕರ್, ರಾಜೇಶ್ ಶೇಟ್, ದೊರೆಸ್ವಾಮಿ, ಮನೋಜ್ ನಾಯ್ಕ, ಸತೀಶ್ ನಾಯ್ಕ, ಸತೀಶ್ ಕೊಳಂಬಕರ್, ರೂಪೇಶ್ ನಾಯ್ಕ, ಶುಭಂ ಕಳಸ, ಪ್ರಮೋದ್ ಸಾಗೇಕರ್, ರೋಹಿದಾಸ್ ಕೇರಕರ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net