ಗುತ್ತಿಗೆದಾರರ ಬಾಕಿ ಬಿಲ್​​ ಹಿನ್ನೆಲೆ: ಶೀಘ್ರದಲ್ಲೇ ಸಿಎಂ ಜತೆ ಸಭೆ ನಿಗದಿ

DK1
Published on

ಬೆಂಗಳೂರು: ಬಾಕಿ ಉಳಿದ 32 ಸಾವಿರ ಕೋಟಿ ರೂ. ಗುತ್ತಿಗೆ ಬಿಲ್‌ಗಳಿಗೆ ಡಿಸೆಂಬರ್ ಒಳಗೆ ಹಣ ಬಿಡುಗಡೆಗೆ ಗಡುವು ಕೊಟ್ಟಿರುವ ಬೆನ್ನಲ್ಲೇ ನಗರಾಭಿವೃದ್ಧಿ ಸಚಿವರಾದ ಡಿಸಿಎಂ ಡಿ.ಕೆ.ಶಿವಕುಮಾರ್, ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಜತೆ ಶನಿವಾರ ಸಭೆ ನಡೆಸಿ ಸಮಸ್ಯೆಯನ್ನು ಆಲಿಸಿದರು.

ಶೇಷಾದ್ರಿಪುರದ ಗೆಸ್ಟ್‌ಹೌಸ್‌ನಲ್ಲಿ ಸಂಘದ ಪದಾಧಿಕಾರಿಗಳ ಜತೆ ಅರ್ಧಗಂಟೆ ಕಾಲ ಸಭೆ ನಡೆಸಿ ಬಾಕಿ ಬಿಲ್‌ಗಳಿಗೆ ಹಣ ಬಿಡುಗಡೆ ಮಾಡಲು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಬಜೆಟ್ ಇಲ್ಲದ ಕಾಮಗಾರಿ ನಡೆಸಲು ಅನುಮತಿ ಕೊಡಲಾಗಿದೆ. ಪ್ರತಿ ಇಲಾಖೆಯಲ್ಲಿ 50-60 ಕೋಟಿ ರೂ.ಬಾಕಿ ಇದೆ. ರಾಜ್ಯದ ಉದ್ದಗಲಕ್ಕೂ ಗುತ್ತಿಗೆದಾರರು ಇದ್ದಾರೆ. ನಮ್ಮ ಇಲಾಖೆಗೆ ಬಂದಿರುವ ಹಣವನ್ನು ನೀವೇ ಹಂಚಿ ಎಂದು ಗುತ್ತಿಗೆದಾರರಿಗೆ ಹೇಳಿದ್ದೇನೆ. ಕಮಿಷನ್ ಕೇಳುತ್ತಿರುವವರ ವಿರುದ್ಧ ದೂರು ಕೊಡುವಂತೆ ಗುತ್ತಿಗೆದಾರರಿಗೆ ಹೇಳಿದ್ದೇನೆ. ಈ ಬಗ್ಗೆ ತನಿಖೆ ಮಾಡಿ ಕ್ರಮಕೈಗೊಳ್ಳುತ್ತೇವೆ. ಅವರ ನೋವು ನಮಗೆ ಅರ್ಥವಾಗುತ್ತದೆ. ಸರ್ಕಾರವನ್ನು ಹೆದರಿಸಲು ಅಗಲ್ಲ. ತನಿಖಾ ವರದಿಯನ್ನು ನೋಡಿದ ಬಳಿಕ ಬಾಕಿ ಬಿಲ್‌ಗಳನ್ನು ಕ್ಲಿಯರ್ ಮಾಡಲು ಬೇಗ ಕ್ರಮಕೈಗೊಳ್ಳುತ್ತೇನೆ ಎಂದು ಡಿಕೆಶಿ ಹೇಳಿದರು.

ಸಿಎಂ, ಹೈಕಮಾಂಡ್‌ಗೆ ಸಭೆ ನಿಗದಿ

ಗುತ್ತಿಗೆದಾರರ ಕುದುಕೊರತೆಯನ್ನು ಆಲಿಸುವ ಸಲುವಾಗಿ ಶೀಘ್ರದಲ್ಲೇ ಸಿಎಂ ಸಿದ್ದರಾಮಯ್ಯ ಅವರ ಜತೆ ಸಭೆ ನಡೆಸಲು ಸಮಯ ನಿಗದಿಪಡಿಸುತ್ತೇನೆ. ಹಿಂದೆ ಬಜೆಟ್ ಆಧಾರದಲ್ಲಿ ಕೆಲಸ ತಗಬೇಕಿತ್ತು. ಆದರೆ. ನಿಗದಿಗಿಂತ ಜಾಸ್ತಿ ತೆಗೆದುಕೊಂಡು ಕಾಮಗಾರಿ ನಿರ್ವಹಿಸಿದ್ದಾರೆ. ಜಲಸಂಪನ್ಮೂಲ ಇಲಾಖೆಯಲ್ಲಿ 200 ಕೋಟಿ ರೂ.ಬಿಲ್ ಇರಬೇಕಿತ್ತು. ಆದರೆ, 17 ಸಾವಿರ ಕೋಟಿ ರೂ. ಬಿಲ್ ಬಾಕಿ ಇದೆ. ಬರೀ 200 ಕೋಟಿ ರೂ.ಮೊತ್ತವನ್ನು ಯಾರ‌್ಯಾರಿಗೆ ಕೊಡಬೇಕು. ಅಲ್ಲದೆ, ದೊಡ್ಡ ಗುತ್ತಿಗೆದಾರರಿಗೆ 2 ಸಾವಿರ ಕೋಟಿ ರೂ.ಬಿಲ್‌ಗಳಿಗೆ ಹಣ ನೀಡಬೇಕಿದೆ ಎಂದು ಡಿಕೆಶಿ ಹೇಳಿದರು. ವಿರೋಧ ಪಕ್ಷದಲ್ಲಿದ್ದಾಗ ಬಜೆಟ್ ಇಲ್ಲದೆ ಕೆಲಸ ಮಾಡಬೇಡಿ ಅಂತಾ ಹೇಳಿದ್ದೆ. ಹಣಕಾಸಿನ ಪರಿಸ್ಥಿತಿ ನೋಡಿಕೊಂಡು ಹಣ ಬಿಡುಗಡೆ ಮಾಡುತ್ತೇವೆ. ಗುತ್ತಿಗೆದಾರರಿಗೆ ಹೈಕಮಾಂಡ್ ಭೇಟಿಗೆ ನಾನೇ ಸಮಯ ನಿಗದಿಪಡಿಸುತ್ತೇನೆ ಎಂದು ಮಾಧ್ಯಮದವರ ಪ್ರಶ್ನೆಗೆ ಡಿಕೆಶಿ ಉತ್ತರಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎಂ.ರವೀಂದ್ರ, ಜಿಬಿಎ ಗುತ್ತಿಗೆದಾರರ ಸಂಘದ ರಮೇಶ್, ಚಿಕ್ಕಹೊಂಬಯ್ಯ, ಹನುಮಂತಯ್ಯ, ಲಕ್ಷ್ಮೀಶ್ ಮತ್ತಿತರರಿದ್ದರು.

ನಮ್ಮ ಮಾತಿಗೆ ಬದ್ಧ

ಡಿಸೆಂಬರ್ ಒಳಗೆ ಬಾಕಿ ಬಿಲ್‌ಗಳಿಗೆ ಹಣ ಬಿಡಗಡೆ ಮಾಡದಿದ್ದರೆ ರಾಜ್ಯಪಾಲರಿಗೆ, ಕಾಂಗ್ರೆಸ್ ಹೈಕಮಾಂಡ್‌ಗೆ ದೂರು ನೀಡುವ ಮಾತಿಗೆ ನಾವು ಬದ್ಧರಾಗಿದ್ದೇವೆ. ಸಭೆಯಲ್ಲಿ 4 ನೀರಾವರಿ ನಿಗಮಗಳಲ್ಲಿ ಬಾಕಿ ಉಳಿದಿರುವ ಬಿಲ್‌ಗಳಿಗೆ ಹಣ ಬಿಡುಗಡೆ ಮಾಡುವುದು, ಕಾರ್ಮಿಕ ಇಲಾಖೆಯಲ್ಲಿ ನಡೆಸುತ್ತಿರುವ ಪ್ಯಾಕೇಜ್ ಟೆಂಡರ್ ರದ್ದುಪಡಿಸುವುದು ಸೇರಿ ಇತರ ಸಮಸ್ಯೆ ಈಡೇರಿಸುವಂತೆ ಡಿಸಿಎಂ ಅವರ ಗಮನಕ್ಕೆ ತಂದಿದ್ದೇವೆ. 50 ಲಕ್ಷ ರೂ.ವರೆಗಿನ ಬಿಲ್‌ಗಳಿಗೆ ಬಿಡುಗಡೆಗೆ ಡಿಕೆಶಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಡಿಸೆಂಬರ್‌ದೊಳಗೆ ಹಂತ ಹಂತವಾಗಿ ಸಮಸ್ಯೆ ಬಗೆಹರಿಯಬಹುದು ಎಂಬ ವಿಶ್ವಾಸ ನಮಗಿದೆ ಎಂದು ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಹೇಳಿದ್ದಾರೆ.

ದೀಪಾವಳಿ ಹಬ್ಬಕ್ಕಾದರೂ ಹಣ ಬಿಡುಗಡೆ ಮಾಡುವಂತೆ ಡಿಸಿಎಂಗೆ ಮನವಿ ಮಾಡಿದ್ದೇವೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ ಶೇ.10 ಭದ್ರತಾ ಠೇವಣಿ ಹಿಂದಿರುಗಿಸುವಂತೆ ಅವರ ಗಮನಕ್ಕೆ ತಂದಿದ್ದೇವೆ.

-ಜಿ.ಎಂ.ನಂದಕುಮಾರ್, ಜಿಬಿಎ ಗುತ್ತಿಗೆದಾರರ ಸಂಘ ಅಧ್ಯಕ್ಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net