ಗುತ್ತಿಗೆದಾರರಿಂದ ಬಿಬಿಎಂಪಿ ಮುಖ್ಯ ಆಯುಕ್ತರ ಭೇಟಿ: ಅಧಿಕಾರಿಗಳ ಸಮ್ಮುಖದ ಸಭೆಗೆ ಒತ್ತಾಯ

nanda
Published on

ಬೆಂಗಳೂರು: ಬಾಕಿ ಬಿಲ್​ಗಳಿಗೆ ಹಣ ಬಿಡುಗಡೆ ಮಾಡುವುದೂ ಸೇರಿ ಗುತ್ತಿಗೆದಾರರ ಇತರೆ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಸಂಬಂಧ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ಕರೆಯಬೇಕೆಂದು ಬಿಬಿಎಂಪಿ ಗುತ್ತಿಗೆದಾರರ ಸಂಘ, ಪಾಲಿಕೆ ಮುಖ್ಯ ಆಯುಕ್ತ ಮಹೇಶ್ವರರಾವ್​ ಅವರನ್ನು ಭೇಟಿ ಮಾಡಿ ಶುಕ್ರವಾರ ಮನವಿ ಪತ್ರ ಸಲ್ಲಿಸಿದೆ.

ಸಂಘದ ಅಧ್ಯಕ್ಷ ಜಿ.ಎಂ.ನಂದಕುಮಾರ್​ ನೇತೃತ್ವದಲ್ಲಿ ಪದಾಧಿಕಾರಿಗಳು, ಗುತ್ತಿಗೆದಾರರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಗಮನಕ್ಕೆ ತಂದರು.ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ಕರೆಯಲು ಅದಷ್ಟೂ ಬೇಗ ದಿನಾಂಕ ನಿಗದಿ ಮಾಡುವಂತೆ ಮುಖ್ಯ ಆಯುಕ್ತರ ಬಳಿ ಮನವಿ ಮಾಡಿಕೊಂಡರು.

ಸಭೆ ಬಳಿಕ ನಂದಕುಮಾರ್​ ಮಾತನಾಡಿ, ಗುತ್ತಿಗೆದಾರರ ಸಮಸ್ಯೆಗಳ ಬಗ್ಗೆ ಮುಖ್ಯ ಆಯುಕ್ತರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಪ್ರಸ್ತುತ ಬಿಬಿಎಂಪಿ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳಿಗೆ 2023ರ ಏಪ್ರಿಲ್​ನಿಂದ 25 ತಿಂಗಳ ಬಿಲ್​ಗಳು ಬಾಕಿ ಇದೆ. ಈ ಪೈಕಿ ಕನಿಷ್ಠ 12 ತಿಂಗಳಗಳ "ಜರ್ನಲ್​​​ ಎಲ್​ಒಸಿ' (ಹಣ ಬಿಡುಗಡೆ ಪತ್ರ) ಬಿಡುಗಡೆ ಮಾಡಬೇಕು. ಕಾಮಗಾರಿಗಳಿದ್ದ 3 ವರ್ಷಗಳ ಡಿಎಲ್​ಪಿ ಅವಧಿ ಮುಗಿದಿದೆ. 3-4 ವರ್ಷವಾದರೂ ಪೂರ್ಣ ಹಣ ಪಾವತಿಯಾಗದೆ ಗುತ್ತಿಗೆದಾರರು ತೀವ್ರ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ನಿವೃತ್ತ ನ್ಯಾ.ನಾಗಮೋಹನ್​ದಾಸ್​ ನೇತೃತ್ವ ತಂಡ ತನಿಖೆ ನಡೆಸಿದ್ದ ತನಿಖಾ ವರದಿ ಬಂದಿರುವ ಕಾರಣ ಶೇ.10 ಭದ್ರತಾ ಠೇವಣಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

ವಾರ್ಡ್​ ವ್ಯಾಪ್ತಿಯ ಕಾಮಗಾರಿಗಳನ್ನು ವಿಭಾಗ ಮಟ್ಟದಲ್ಲಿ ಒಟ್ಟುಗೂಡಿಸಿ ಪ್ಯಾಕೇಜ್​ ಮಾಡಿ ಟೆಂಡರ್​ ಆಹ್ವಾನಿಸಲಾಗುತ್ತಿದೆ. ಇದರಿಂದ ಸಣ್ಣ, ಮಧ್ಯಮ ಗುತ್ತಿಗೆದಾರರಿಗೆ ಅನ್ಯಾಯವಾಗಿದೆ. ಹಾಗಾಗಿ, ಪ್ಯಾಕೇಜ್​ ಪದ್ಧತಿಯನ್ನು ರದ್ದುಪಡಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್​, ಬಿಬಿಎಂಪಿ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಎನ್​.ಚೇತನ್​ಕುಮಾರ್​ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net