ಬಾಕಿ ಬಿಲ್ ಪಾವತಿಗೆ ಗುತ್ತಿಗೆದಾರ ಸಂಘದಿಂದ ಒತ್ತಾಯ

DND GUTTIGEDAR MANAVI
Published on

ದಾಂಡೇಲಿ: ಕಳೆದ ಏಳು ವರ್ಷಗಳಿಂದ ಕಾಮಗಾರಿಗಳ ಬಿಲ್ ಪಾವತಿಯಾಗದ ಕಾರಣ ಗುತ್ತಿಗೆದಾರ ರವಿಶಂಕರ ಜನ್ನು ಅವರು ನಿಧನ ಹೊಂದಿದ್ದಾರೆ ಎಂದು ಆರೋಪಿಸಿ ದಾಂಡೇಲಿಯ ಕೆನರಾ ಲೋಕೋಪಯೋಗಿ ಗುತ್ತಿಗೆದಾರ ಸಂಘದ ವತಿಯಿಂದ ಬುಧವಾರ ನಗರಸಭೆ ಮುಂದೆ ಪ್ರತಿಭಟನೆ ನಡೆಸಿ ಪೌರಾಯುಕ್ತರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಗುತ್ತಿಗೆದಾರ ರವಿಶಂಕರ ಜನ್ನು ತಮ್ಮ ಬಾಕಿ ಇರುವ ಬಿಲ್​ಗಳ ಮಂಜೂರಿಗಾಗಿ ಓಡಾಡಿದರು. ಲೋಕೋಪಯೋಗಿ ಇಲಾಖೆಯ ಠೇವಣಿ ಹಣ (ನಾಡಕಚೇರಿ ಕಟ್ಟಡ) ಏಳು ವರ್ಷದಿಂದ ಬಿಡುಗಡೆಯಾಗಿಲ್ಲ. ನಗರಸಭೆಯ 2019-20ನೇ ಸಾಲಿನ ಎಸ್​ಎಫ್​ಸಿ ವಿಶೇಷ ಅನುದಾನದಡಿ ನಿರ್ವಹಿಸಿದ ಕಾಮಗಾರಿಯ ಬಿಲ್ ಬಾಕಿ ಇದೆ. ಜೊಯಿಡಾ ತಾಲೂಕು ಜಗಲಪೇಟ ಗ್ರಾಪಂ ವ್ಯಾಪ್ತಿಯ ತುಂಬುಲಿ ಪ್ರದೇಶದಲ್ಲಿ ನಿರ್ವಹಿಸಿದ ರಸ್ತೆ ಕಾಮಗಾರಿಯ 35 ರಿಂದ 40 ಲಕ್ಷ ರೂ. ಎರಡು ವರ್ಷದಿಂದ ಬಾಕಿ ಇದೆ. ಹಲವು ಬಿಲ್ ಬಾಕಿ ಉಳಿದಿದ್ದು, ಅವರು ಮಾಡಿದ ಸಾಲ ತೀರಿಸಲಾಗದೆ ಸಂಕಷ್ಟಕ್ಕೆ ಒಳಗಾಗಿದ್ದರು.

ಗುತ್ತಿಗೆದಾರ ಆರ್.ಡಿ. ಜನ್ನು ಅವರಂತೆ ಇಲ್ಲಿರುವ ಹಲವು ಗುತ್ತಿಗೆದಾರರು ಸುಮಾರು ಮೂರು ಕೋಟಿ ರೂ.ಗಳಿಗಿಂತ ಹೆಚ್ಚಿನ ಕಾಮಗಾರಿಯನ್ನು ದಾಂಡೇಲಿ ನಗರಸಭೆಯಲ್ಲಿ ನಿರ್ವಹಿಸಿದ್ದಾರೆ. ಕಳೆದ ಎರಡೂವರೆ ವರ್ಷದಿಂದ ಗುತ್ತಿಗೆದಾರರು ಸಾಲದ ಸುಳಿಯಲ್ಲಿ ಸಿಲುಕಿ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಗುತ್ತಿಗೆದಾರರ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.

ಪೌರಾಯುಕ್ತ ವಿವೇಕ ಬನ್ನೆ ಮಾತನಾಡಿ, 2024-25ರ ಅವಧಿಯ ಮೊದಲ ಹಂತದಲ್ಲಿ ದಾಂಡೇಲಿ ನಗರಸಭೆಯಿಂದ ಕೆಲಸ ಮಾಡಿದ ಗುತ್ತಿಗೆದಾರರಿಗೆ ಈಗಾಗಲೇ ಐದು ಕೋಟಿ ರೂ. ಮಂಜೂರು ಮಾಡಲಾಗಿದೆ. ಉಳಿದ ಬಾಕಿ ಇರುವ ಹಣವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಶಾಸಕ ಆರ್.ವಿ. ದೇಶಪಾಂಡೆ ಅವರನ್ನು ಭೇಟಿ ಮಾಡಿದ ಗುತ್ತಿಗೆದಾರರಿಗೆ ರವಿಶಂಕರ ಜನ್ನು ನಿಧನದ ಬಗ್ಗೆ ನೋವಿದೆ. ಅವರ ಹಾಗೂ ಉಳಿದ ಎಲ್ಲ ಗುತ್ತಿಗೆದಾರರ ಬಿಲ್ ಮಂಜೂರು ಮಾಡಿಸಲು ಪ್ರಯತ್ನಿಸುತ್ತೇನೆ. ಆದರೆ, ಬಾಕಿ ಇರುವ ಬಿಲ್​ಗಳನ್ನು ನನ್ನ ಅವಧಿಯ ಬಿಲ್​ಗಳೆಂದು ಬಿಂಬಿಸಿ ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಗುತ್ತಿಗೆದಾರ ಸಂಘದ ಅಧ್ಯಕ್ಷ ಎನ್. ಶಶಿಧರನ್, ಪ್ರಧಾನ ಕಾರ್ಯದರ್ಶಿ ಬಿ.ಎಲ್. ಲಮಾಣಿ, ಖಜಾಂಚಿ ಕೆ. ಸುಧಾಕರ್ ರೆಡ್ಡಿ, ಸಂಘಟನಾ ಕಾರ್ಯದರ್ಶಿ ಆರ್.ಸಿ. ಸುದರ್ಶನ್, ಸಹ ಕಾರ್ಯದರ್ಶಿ ಎಸ್.ಎಂ. ಪಡುಕೋಣೆ, ಆನಂದ ಮಾಧವನ್ ಪದಾಧಿಕಾರಿಗಳು, ಗುತ್ತಿಗೆದಾರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net