

ಬೆಂಗಳೂರು:ಸರ್ಕಾರದ ವಿವಿಧ ಇಲಾಖೆಗಳಲ್ಲಿ ಬಾಕಿ ಉಳಿದಿರುವ ಕೋಟ್ಯಂತರ ರೂಪಾಯಿ ಬಿಲ್ಗಳಿಗೆ ಹಣ ಬಿಡುಗಡೆ ಮಾಡುವ ಸಂಬಂಧ ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಲೋಕೋಪಯೋಗಿ, ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್, ಪೌರಾಡಳಿತ, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ, ಸಣ್ಣ ನೀರಾವರಿ, ಮಹಾನಗರ ಪಾಲಿಕೆಯಲ್ಲಿ ಕೋಟ್ಯಂತರ ರೂ.ಬಿಲ್ಗಳಿಗೆ ಹಲವು ವರ್ಷಗಳಿಂದ ಹಣ ಪಾವತಿಯಾಗದೆ ಗುತ್ತಿಗೆದಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೆಲ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಜ್ಯೇಷ್ಠತೆ ಆಧಾರದ ಮೇರೆಗೆ ಅನುದಾನ ಬಿಡುಗಡೆ ಮಾಡಬೇಕು. ಸಮಸ್ಯೆ ಬಗೆಹರಿಸಲು ಸಂಘದ ಅಧ್ಯಕ್ಷ (ಪ್ರಭಾರ) ಜಗನ್ನಾಥ್ ಬಿ.ಶೇಗಜಿ ಹಾಗೂ ಬಿಬಿಎಂಪಿ ಗುತ್ತಿಗೆದಾರರ ಸಂದ ಅಧ್ಯಕ್ಷ ಜೆ.ಎಂ.ನಂದಕುಮಾರ್ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಸಚಿವರಿಗೆ ಮನವಿ ಮಾಡಿಕೊಂಡರು. ಇದೇ ವೇಳೆ ಕೆಲ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು. ಉಪಾಧ್ಯಕ್ಷ ಎನ್.ಮಂಜುನಾಥ್, ಕಾರ್ಯಾಧ್ಯಕ್ಷರಾದ ಆರ್. ಮಂಜುನಾಥ್, ಶಂಕರ್ಗೌಡ ಶಾನಿ ಸೇರಿ ಸಂಘದ ಪದಾಧಿಕಾರಿಗಳು ಮತ್ತಿತರರಿದ್ದರು.
6 ಇಲಾಖೆಗಳಿಗೆ ಎಚ್ಚರಿಕೆ ಪತ್ರ:
ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಜಲಸಂಪನ್ಮೂಲ, ವಸತಿ, ಪೌರಾಡಳಿತ, ಸಣ್ಣ ನೀರಾವರಿ ಇಲಾಖೆಗಳವರು ಗುತ್ತಿಗೆದಾರರ ಬೇಡಿಕೆ ಬಗ್ಗೆ ಗಮನಕೊಟ್ಟಿಲ್ಲ. ಹೀಗಾಗಿ, ಗುರುವಾರ ಮತ್ತೆ ಪತ್ರ ಬರೆದಿದ್ದು, ವಾರದೊಳಗೆ ಗಮನ ಕೊಡಬೇಕೆಂದು ಕೋರಿದ್ದೇವೆ. ಒಂದೊಮ್ಮೆ ಮನವಿಗೆ ಸ್ಪಂದಿಸದೇ ಹೋದರೆ ನಮ್ಮ ದಾರಿ ನಮ್ಮದು ಎಂದು ಜಗನ್ನಾಥ್ ಬಿ.ಶೇಗಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಅನಗತ್ಯ ನಿಯಮ ಹೇರಿ ಸ್ಥಳಿಯ ಗುತ್ತಿಗೆದಾರರನ್ನು ಅನರ್ಹಗೊಳಿಸಿ ಬೇರೆ ರಾಜ್ಯದ ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ಹಲವು ಕಾಮಗಾರಿಗಳನ್ನು ಒಗ್ಗೂಡಿಸಿ ಪ್ಯಾಕೇಜ್ ಪದ್ಧತಿಯಲ್ಲಿ ಟೆಂಡರ್ ಕರೆಯಲಾಗುತ್ತಿದೆ. ಇದರಿಂದಾಗಿ ಮಧ್ಯಮ ವರ್ಗದ ಸಾಮಾನ್ಯ, ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರಿಗೆ ಅನ್ಯಾಯವಾಗುತ್ತಿದೆ. ಹಾಗಾಗಿ ಪ್ಯಾಕೇಜ್ ಟೆಂಡರ್ ಪದ್ಧತಿ ರದ್ದುಪಡಿಸಬೇಕೆಂದು ಒತ್ತಾಯಿಸಿದರು.
ಸಭೆ ನಡೆಸಿದ ಸಚಿವರು:
ವಿಕಾಸಸೌಧ ಸಭಾಂಗಣದಲ್ಲಿ ಸತೀಶ್ ಜಾರಕಿಹೊಳಿ ಅವರು, ಉನ್ನತ ಅಧಿಕಾರಿಗಳು ಹಾಗೂ ಸಂಘದ ಪ್ರತಿನಿಧಿಗಳ ಜತೆ ಸಭೆ ನಡೆಸಿ ಕೆಲ ತೀರ್ಮಾನ ಕೈಗೊಂಡರು. ಇಲಾಖೆಯಲ್ಲಿ 2023ರವರೆಗಿನ ಎಲ್ಲ ವಿಜಿ ಬಿಲ್ಗಳ ಹಣ ನೀಡುವುದು, ಎಂಡಿಪಿ ವಿಚಾರದಲ್ಲಿ ರಾಯಲ್ಟಿ ಮತ್ತು ಹೆಚ್ಚುವರಿ ಮೊತ್ತವನ್ನು ಇಲಾಖೆ ಭರಿಸಲು ತೀರ್ಮಾನಿಸಲಾಯಿತು. 5 ಪಟ್ಟು ದಂಢ ವಿಧಿಸದಂತೆ, ವ್ಯಾಟ್, ಜಿಎಸ್ಟಿ ವ್ಯತ್ಯಾಸದ ಬಗ್ಗೆ ಓಡಿಶಾ ಅಥವಾ ಕೇರಳ ಮಾದರಿ ಅನುಸರಿಸಿ ಫೆ.15ರೊಳಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವುದು, ಎಫ್ಎಸ್ಡಿ ಅನ್ನು ಶೇ.5ರಿಂದ ಶೇ.3ಕ್ಕೆ ಇಳಿಸುವುದು, ಕೆಲಸ ಮುಗಿದ ಪ್ರಮಾಣಪತ್ರ 10 ವರ್ಷಕ್ಕೆ ವಿಸ್ತರಿಸುವುದು ಮತ್ತು ರದ್ದಾದ ಪರವಾನಗಿ ಮರು ಸ್ಥಾಪಿಸಲು ಸಚಿವರು, ಅಧಿಕಾರಿಗಳಿಗೆ ಸೂಚಿಸಿದರು.
ಹಿಂದಿನ ಸರ್ಕಾರದ ಬಾಕಿ ತೀರಿಸಲು 14 ಸಾವಿರ ಕೋಟಿ ರೂ.ಒಂದೇ ಬಾರಿಗೆ ಎಲ್ಲಿಂದ ತರುವುದು. ಬಜೆಟ್ ಅನುದಾನ ಹೊರತಾಗಿ ಕಾರ್ಯಾದೇಶ ಮಾಡಿದ್ದಾರೆ. ಗುತ್ತಿಗೆದಾರರು ಕಾಮಗಾರಿ ಮಾಡಿದ್ದಾರೆ. ಗುತ್ತಿಗೆದಾರರದ್ದೂ ತಪ್ಪಿಲ್ಲ. ನಾವು ಸಮಸ್ಯೆ ಪರಿಹಾರ ಮಾಡಬೇಕಿದ್ದು, ದಾರಿ ಹುಡುಕುತ್ತಿದ್ದೇವೆ.
| ಸತೀಶ್ ಜಾರಕಿಹೊಳಿ, ಸಚಿವ
ಗುತ್ತಿಗೆದಾರರ ಮೇಲಿನ ದ್ವೇಷದಿಂದ ಟೆಂಡರ್ ಪ್ರೀಮಿಯಂ ಅನ್ನು ಶೇ.5ಕ್ಕೆ ಸೀಮಿತಗೊಳಿಸಲಾಗಿದೆ. ಇದರಿಂದಾಗಿ ದರಗಳನ್ನು ನಮೂದಿಸುವ ಗುತ್ತಿಗೆದಾರರ ಅಧಿಕಾರ ಮೊಟಕುಗೊಂಡಿದೆ. ಅದನ್ನು ಮೊದಲಿನಂತೆ ಶೇ.15ಕ್ಕೆ ಹೆಚ್ಚಿಸಬೇಕು.
| ಜಿ.ಎಂ.ರವೀಂದ್ರ. ರಾಜ್ಯ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ.